

ರಾಂಚಿ: ಆಸ್ಪತ್ರೆಯು ಆ್ಯಂಬುಲೆನ್ಸ್ ಒದಗಿಸದ ಕಾರಣ ಬುಡಕಟ್ಟು ಕುಟುಂಬವೊಂದು ತನ್ನ ನಾಲ್ಕು ತಿಂಗಳ ಶಿಶುವಿನ ಮೃತದೇಹವನ್ನು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಮನೆಗೆ ಸಾಗಿಸಿರುವ ಅಮಾನವೀಯ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ನೊಮುಂಡಿ ಬ್ಲಾಕ್‌ನ ಬಲ್ಜೋರಿ ಗ್ರಾಮದ ನಿವಾಸಿ ದಿಂಬಾ ಚತೊಂಬ ತನ್ನ ಕಾಯಿಲೆ ಪೀಡಿತ ಮಗುವನ್ನು ಗುರುವಾರ ಚೈಬಾಸಾದಲ್ಲಿರುವ ಸದರ್ ಆಸ್ಪತ್ರೆಗೆ ಕರೆತಂದಿದ್ದರು. ಮಗುವಿನ ಸ್ಥಿತಿ ಹದಗೆಟ್ಟಿದ್ದು, ಶುಕ್ರವಾರ ಚಿಕಿತ್ಸೆ ವೇಳೆ ಮಗು ಸಾವನ್ನಪ್ಪಿದೆ.
ಮಗು ಸಾವಿನ ನಂತರ ಶವವನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ವಾಹನವೊಂದನ್ನು ಒದಗಿಸುವಂತೆ ಕುಟುಂಬಸ್ಥರು ಆಸ್ಪತ್ರೆ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ. ಅವರು ವಾಹನಕ್ಕಾಗಿ ಗಂಟೆ ಗಟ್ಟಲೇ ಕಾದಿದ್ದಾರೆ. ಆದರೆ ಆಸ್ಪತ್ರೆಯೂ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಲ್ಲ.
ದಿಂಬರ ಬಳಿ ಕೇವಲ 100 ರೂ. ಇತ್ತು. ಅಸಹಾಯಕರಾದ ಅವರು ಸಮೀಪದ ಅಂಗಡಿಯೊಂದರಿಂದ ರೂ. 20 ಗೆ ಪ್ಲಾಸ್ಟಿಕ್ ಚೀಲವೊಂದನ್ನು ಖರೀದಿಸಿ ಅದರಲ್ಲಿ ಮಗುವಿನ ಮೃತದೇಹವನ್ನು ತುಂಬಿಸಿ ಬಸ್ ನಲ್ಲಿ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.
ಈ ಘಟನೆ ಬಗ್ಗೆ ಪಶ್ಚಿಮ ಸಿಂಗ್ ಭೂಮ್ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ. ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಚಂದನ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ಭರವಸೆ ನೀಡಿದ್ದಾರೆ. ಒಂದು ವೇಳೆ ಬುಡಕಟ್ಟು ಕುಟುಂಬಕ್ಕೆ ನಿಜವಾಗಿಯೂ ಈ ರೀತಿಯ ಘಟನೆ ನಡೆದಿದ್ದರೆ ತನಿಖೆ ನಡೆಸಿ ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
Advertisement