

ಕೋಲ್ಕತ್ತಾ: ಇತ್ತೀಚಿಗೆ ಮುಕ್ತಾಯವಾದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿಗೆ ರಹದಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ದಟ್ಟವಾದ ಮಂಜು ಕವಿದಿದ್ದರಿಂದ ಕಡಿಮೆ ಗೋಚರತೆಯಿಂದಾಗಿ ಪಶ್ಚಿಮ ಬಂಗಾಳದ ತಾಹೆರ್ ಪುರ ಹೆಲಿಪ್ಯಾಡ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಇಳಿಯಲು ವಿಫಲವಾದ ನಂತರ ವರ್ಚಯಲ್ ಮೂಲಕ ಬಿಜೆಪಿ ರಾಜಕೀಯ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಇಂದು ದೇಶವು ಕ್ಷಿಪ್ರ ಅಭಿವೃದ್ಧಿಯನ್ನು ಬಯಸುತ್ತಿದೆ. ಬಿಹಾರ ಮತ್ತೊಮ್ಮೆ ಎನ್‌ಡಿಎ ಸರ್ಕಾರಕ್ಕೆ ಅಭಿವೃದ್ಧಿಗಾಗಿ ಬೃಹತ್ ಜನಾದೇಶವನ್ನು ನೀಡಿದೆ. ಬಿಹಾರವು ಬಂಗಾಳದಲ್ಲಿ ಬಿಜೆಪಿಯ ಗೆಲುವಿಗೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಿದರು.
ಬಿಹಾರದಲ್ಲಿ ಆರ್‌ಜೆಡಿ ವಿರುದ್ಧದ ತನ್ನ 'ಜಂಗಲ್ ರಾಜ್' ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಆಡಳಿತದೊಂದಿಗೆ ಹೋಲಿಸಿದ ಪ್ರಧಾನಿ, ಪಶ್ಚಿಮ ಬಂಗಾಳದಲ್ಲಿಯೂ 'ಮಹಾ ಜಂಗಲ್ ರಾಜ್' ಅನ್ನು ಬಿಜೆಪಿ ಕೊನೆಗೊಳಿಸಲಿದೆ ಎಂದು ಹೇಳುವ ಮೂಲಕ TCM ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
"ಜಂಗಲ್ ರಾಜ್' ಆಡಳಿತವನ್ನು ಬಿಹಾರ ಒಂದೇ ಧ್ವನಿಯಲ್ಲಿ ತಿರಸ್ಕರಿಸಿದೆ. 20 ವರ್ಷಗಳ ನಂತರವೂ ಅವರು ಬಿಜೆಪಿ-ಎನ್‌ಡಿಎಗೆ ಮೊದಲಿಗಿಂತ ಹೆಚ್ಚು ಸ್ಥಾನಗಳನ್ನು ನೀಡಿದ್ದಾರೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ತುಷ್ಟೀಕರಣ ರಾಜಕಾರಣ ತುಂಬಿರುವ ಬಂಗಾಳದಲ್ಲಿ ಟಿಎಂಸಿಯ 'ಮಹಾ ಜಂಗಲ್ ರಾಜ್' ಅನ್ನು ಕೊನೆಗೊಳಿಸುತ್ತೇವೆ ಎಂದು ಅವರು ಹೇಳಿದರು.
ಟಿಎಂಸಿ ನನ್ನನ್ನು ಮತ್ತು ಬಿಜೆಪಿಯನ್ನು ಎಷ್ಟು ಬೇಕಾದರೂ ವಿರೋಧಿಸಲಿ, ಆದರೆ ಬಂಗಾಳದ ಪ್ರಗತಿಯನ್ನು ನಿಲ್ಲಿಸಬಾರದು ಎಂದು ಹೇಳಿದ ಪ್ರಧಾನಿ, ನುಸುಳುಕೋರರು ರಾಜ್ಯದಲ್ಲಿ ಟಿಎಂಸಿಯ ಪ್ರಾಯೋಜಕತ್ವವನ್ನು ಅನುಭವಿಸುತ್ತಿದ್ದಾರೆ ಮತ್ತು ಅವರನ್ನು ಗುರುತಿಸುವುದನ್ನು ತಡೆಯಲು SIR ಕಾರ್ಯಾಚರಣೆಯನ್ನು ವಿರೋಧಿಸುತ್ತಿದೆ ಎಂದರು.
SIR ಪ್ರಕ್ರಿಯೆ ಮುಗಿದು ಕರಡು ಮತದಾರರ ಪಟ್ಟಿಗಳನ್ನು ಪ್ರಕಟಿಸಿದ ನಂತರ ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ಮೋದಿ ಅವರ ಮೊದಲ ಭೇಟಿ ಇದಾಗಿದೆ. ಕಳೆದ ಐದು ತಿಂಗಳಲ್ಲಿ ಮೂರನೇ ಭೇಟಿಯಾಗಿದೆ. SIR ಪ್ರಕ್ರಿಯೆಗೆ ಟಿಎಂಸಿಯ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿತ್ತು. ಈ ನಡುವೆ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಮತ್ತು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲು ಪ್ರಧಾನಿ ಮೋದಿ ಪಶ್ಚಿಮ ಬಂಗಾಳಕ್ಕೆ ಆಗಮಿಸಿದ್ದಾರೆ.
Advertisement