

ಗುವಾಹಟಿ: ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳನ್ನು ನಿರ್ಲಕ್ಷಿಸಿದೆ ಮತ್ತು ಆ ಪ್ರದೇಶದ ಭದ್ರತೆ ಪಣಕ್ಕಿಟ್ಟು ಒಳನುಸುಳುವವರನ್ನು ರಕ್ಷಿಸಿದೆ ಎಂದು ಶನಿವಾರ ಆರೋಪಿಸಿದರು.
ಇಂದು ಗುವಾಹಟಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟಿಸಿದ ನಂತರ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR)ಯನ್ನು ಪ್ರಾರಂಭಿಸಿದೆ. ಒಳನುಸುಳುವಿಕೆಯನ್ನು ತಡೆಯಲು ಕೇಂದ್ರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ ಕೆಲವು "ದೇಶದ್ರೋಹಿಗಳು" ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಸ್ಸಾಂ ಮತ್ತು ಈಶಾನ್ಯದ ಅಭಿವೃದ್ಧಿ ಎಂದಿಗೂ ಕಾಂಗ್ರೆಸ್ ಕಾರ್ಯಸೂಚಿಯ ಭಾಗವಾಗಿರಲಿಲ್ಲ. ಅವರ ಅವಧಿಯಲ್ಲಿ, ಒಳನುಸುಳುವವರಿಗೆ ರಾಜ್ಯದಲ್ಲಿ ಅರಣ್ಯ ಮತ್ತು ಇತರ ಭೂಮಿಯನ್ನು ವಶಪಡಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಇದು ಅಸ್ಸಾಂನ ಭದ್ರತೆ ಮತ್ತು ಪ್ರತಿಷ್ಠೆಗೆ ಅಪಾಯವನ್ನುಂಟುಮಾಡಿದೆ. ಬಿಜೆಪಿ ಸರ್ಕಾರವು ಈ ಪ್ರದೇಶದಲ್ಲಿ ದಶಕಗಳಿಂದ ಮಾಡಿದ್ದ ತಪ್ಪುಗಳನ್ನು ಈಗ ಸರಿಪಡಿಸುತ್ತಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.
ಹಿಂದಿನ ಸರ್ಕಾರಗಳ ಆಡಳಿತದಲ್ಲಿ ದಶಕಗಳ ಕಾಲ ಹಿಂಸಾಚಾರ ಪ್ರವರ್ಧಮಾನಕ್ಕೆ ಬಂದಿತ್ತು. ಕಳೆದ 10–11 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಲು ಪ್ರಾರಂಭಿಸಿದೆ. ಒಂದು ಕಾಲದಲ್ಲಿ ಹಿಂಸಾಚಾರ ಪೀಡಿತವೆಂದು ಪರಿಗಣಿಸಲ್ಪಟ್ಟ ಜಿಲ್ಲೆಗಳು ಈಗ ಮಹತ್ವಾಕಾಂಕ್ಷೆಯ ಜಿಲ್ಲೆಗಳಾಗಿ ಪ್ರಗತಿ ಸಾಧಿಸುತ್ತಿವೆ ಎಂದು ಅವರು ಹೇಳಿದರು.
ಬಿಜೆಪಿಯ ಆಡಳಿತ ಮಾದರಿಯನ್ನು ಎತ್ತಿ ತೋರಿಸಿದ ಮೋದಿ, ಪಕ್ಷದ "ಡಬಲ್-ಎಂಜಿನ್ ಸರ್ಕಾರ"ದ ಅಡಿಯಲ್ಲಿ ಅಸ್ಸಾಂನಲ್ಲಿ ಅಭಿವೃದ್ಧಿ ಯಾವುದೇ ಅಡೆತಡೆಯಿಲ್ಲದೆ ಪ್ರಬಲ ಬ್ರಹ್ಮಪುತ್ರ ನದಿಯಂತೆ ಹರಿಯುತ್ತಿದೆ ಎಂದು ಪ್ರಧಾನಿ ಹೇಳಿದರು.
Advertisement