

ನವದೆಹಲಿ: ದೆಹಲಿಯಲ್ಲಿ ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ತಾಯಿ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ ಆರೋಪದ ನಂತರ ಭಾರತ ಕೇವಲ ಸತ್ತ ಆರ್ಥಿಕತೆಯಲ್ಲ, ಸತ್ತ ಸಮಾಜವೂ ಆಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಕಿಡಿ ಕಾರಿದ್ದಾರೆ.
ದೆಹಲಿ ಹೈಕೋರ್ಟ್, ಅತ್ಯಾಚಾರ ಪ್ರಕರಣದ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್ ಜೈಲು ಶಿಕ್ಷೆ ಅಮಾನತುಗೊಳಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಅತ್ಯಾಚಾರ ಸಂತ್ರಸ್ತೆ ಮೇಲೆ ದೌರ್ಜನ್ಯ ಮತ್ತು ಭಯವನ್ನುಂಟುಮಾಡುವ ಬದಲು ಗೌರವದಿಂದ ನಡೆಸಿಕೊಳ್ಳಬೇಕು ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
"ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯನ್ನು ಈ ರೀತಿ ನಡೆಸಿಕೊಳ್ಳುವುದು ಸೂಕ್ತವೇ? ನ್ಯಾಯಕ್ಕಾಗಿ ಧ್ವನಿ ಎತ್ತುವ ಧೈರ್ಯ ಹೊಂದಿರುವುದು ಆಕೆಯ 'ತಪ್ಪೇ? ವಿಶೇಷವಾಗಿ ಸಂತ್ರಸ್ತೆ ಪದೇ ಪದೇ ಕಿರುಕುಳಕ್ಕೊಳಗಾಗುತ್ತಿರುವಾಗ ಮತ್ತು ಭಯದ ನೆರಳಿನಲ್ಲಿ ಬದುಕುತ್ತಿರುವಾಗ ಅಪರಾಧಿ(ಮಾಜಿ ಬಿಜೆಪಿ ಶಾಸಕ ಸೆಂಗಾರ್)ಯ ಶಿಕ್ಷೆ ಅಮಾನತುಗೊಳಿಸಿ, ಜಾಮೀನು ನೀಡಲಾಗಿದೆ ಎಂಬುದು ಅತ್ಯಂತ ನಿರಾಶಾದಾಯಕ ಮತ್ತು ನಾಚಿಕೆಗೇಡಿನ ಸಂಗತಿ" ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಅತ್ಯಾಚಾರಿಗಳಿಗೆ ಜಾಮೀನು ಮತ್ತು ಸಂತ್ರಸ್ತೆಯನ್ನು ಅಪರಾಧಿಗಳಂತೆ ನಡೆಸಿಕೊಳ್ಳುವುದು - ಇದು ಯಾವ ರೀತಿಯ ನ್ಯಾಯ?" "ಇಂತಹ ಅಮಾನವೀಯ ಘಟನೆಗಳಿಂದ ನಾವು ಕೇವಲ ಸತ್ತ ಆರ್ಥಿಕತೆ ಮಾತ್ರವಲ್ಲ, ಸತ್ತ ಸಮಾಜದತ್ತ ಸಾಗುತ್ತಿದ್ದೇವೆ" ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವದಲ್ಲಿ, ಭಿನ್ನಾಭಿಪ್ರಾಯದ ಧ್ವನಿ ಎತ್ತುವುದು ಅವರ ಹಕ್ಕು ಮತ್ತು ಅದನ್ನು ನಿಗ್ರಹಿಸುವುದು ಅಪರಾಧ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
"ಸಂತ್ರಸ್ತರಿಗೆ ಗೌರವ, ಸುರಕ್ಷತೆ ಮತ್ತು ನ್ಯಾಯ ಬೇಕು - ಅಸಹಾಯಕತೆ, ಭಯ ಮತ್ತು ಅನ್ಯಾಯವಲ್ಲ" ಎಂದು ಹೇಳಿದ್ದಾರೆ.
2017 ರ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಬುಧವಾರ, ಉಚ್ಚಾಟಿತ ಬಿಜೆಪಿ ನಾಯಕ ಸೆಂಗಾರ್ ಅವರ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗುವುದಾಗಿ ಹೇಳಿದ್ದಾರೆ.
ಸೆಂಗಾರ್‌ಗೆ ಜಾಮೀನು ನೀಡಿದ ತೀರ್ಪಿನ ವಿರುದ್ಧ ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ತಾಯಿ ಇಂದು ಮಂಡಿ ಹೌಸ್ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಬಲಪ್ರಯೋಗ ಮಾಡಿದ್ದು, ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement