

ನವದೆಹಲಿ: 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್ ಶಿಕ್ಷೆ ಅಮಾನತು ವಿರೋಧಿಸಿ ಸಂತ್ರಸ್ತೆ ತಾಯಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಅವರ ಮೇಲೆ ಸಿಆರ್ ಪಿಎಫ್ ಪೊಲೀಸರು ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ಅವರ ಸುದ್ದಿಗೋಷ್ಠಿಯನ್ನೂ ತಡೆದಿದ್ದಾರೆ.
ಬುಧವಾರ ದೆಹಲಿಯ ಭದ್ರತಾ ಸಿಬ್ಬಂದಿ ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ತಾಯಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡದಂತೆ ತಡೆದರು. ಆಕೆಯ ವೃದ್ಧ ತಾಯಿಯನ್ನು ಚಲಿಸುವ ಬಸ್ಸಿನಿಂದ ಇಳಿಯುವಂತೆ ಒತ್ತಾಯಿಸಿದರು ಎನ್ನಲಾಗಿದೆ.
2017 ರ ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರ ಜೈಲು ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಅಮಾನತುಗೊಳಿಸಿದ ಒಂದು ದಿನದ ನಂತರ ಈ ಘಟನೆ ಸಂಭವಿಸಿದೆ.
ಸೆಂಗಾರ್ ಅವರ ಮೇಲ್ಮನವಿ ಇತ್ಯರ್ಥವಾಗುವವರೆಗೆ ನ್ಯಾಯಾಲಯವು ಶಿಕ್ಷೆಯನ್ನು ಕೆಲವು ಷರತ್ತುಗಳಿಗೆ ಒಳಪಟ್ಟು ಅಮಾನತುಗೊಳಿಸಿದೆ ಎನ್ನಲಾಗಿದೆ.
ಕೋರ್ಟ್ ಆದೇಶ ವಿರೋಧಿಸಿ ಪ್ರತಿಭಟನೆ
2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ ಹಾಗೂ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಗೆ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿದ ದೆಹಲಿ ಹೈಕೋರ್ಟ್ ಆದೇಶವನ್ನು ವಿರೋಧಿಸಿ, ಸಂತ್ರಸ್ತೆ, ಆಕೆಯ ತಾಯಿ ಮತ್ತು ಮಹಿಳಾ ಕಾರ್ಯಕರ್ತೆ ಯೋಗಿತಾ ಭಯನಾ ಮಂಗಳವಾರ ಇಂಡಿಯಾ ಗೇಟ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಸಂತ್ರಸ್ಥೆ ತಾಯಿ ವಶಕ್ಕೆ
ಬಳಿಕ ದೆಹಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಬಲ ಪ್ರಯೋಗಿಸಿದ್ದಾರೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಸಂತ್ರಸ್ತೆಯ ತಾಯಿಯನ್ನು ಬಂಧಿಸಲಾಗಿದೆ. ದೆಹಲಿ ಪೊಲೀಸರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸಂತ್ರಸ್ಥೆ ತಾಯಿ ಹೇಳಿದ್ದೇನು?
ಪ್ರತಿಭಟನೆ ವೇಳೆ ಮಾತನಾಡಿದ ಸಂತ್ರಸ್ತೆ, ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿಯೇ ಸೆಂಗಾರ್ ಗೆ ಜಾಮೀನು ನೀಡಲಾಗಿದೆ ಎಂದು ಆರೋಪಿಸಿದರು. ಅತ್ಯಾಚಾರ ಆರೋಪಿ ಹೊರಗಿರುವುದು ತಮ್ಮ ಹಾಗೂ ಕುಟುಂಬದ ಸುರಕ್ಷತೆಗೆ ಅಪಾಯಕಾರಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಜಾಮೀನು ಆದೇಶ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದರು.
ಅಷ್ಟೇ ಅಲ್ಲದೇ, "ನಮಗೆ ನ್ಯಾಯ ಸಿಗಲಿಲ್ಲ. ಅವರು ನನ್ನ ಮಗಳನ್ನು ಸೆರೆಯಾಳುಗಳಂತೆ ಕರೆದುಕೊಂಡು ಹೋಗುತ್ತಿದ್ದಾರೆ. ಈ ಭದ್ರತಾ ಸಿಬ್ಬಂದಿ ನಮ್ಮೆಲ್ಲರನ್ನೂ ಕೊಲ್ಲಲು ಬಯಸುತ್ತಾರೆ. ಕುಲದೀಪ್ ಸೆಂಗಾರ್ ಅವರ ಜಾಮೀನು ರದ್ದುಗೊಳಿಸಬೇಕು. ಇಲ್ಲದಿದ್ದರೆ, ನಾವು ನಮ್ಮ ಪ್ರಾಣವನ್ನೇ ತ್ಯಜಿಸುತ್ತೇವೆ. ನಾವು ಸುರಕ್ಷಿತವಾಗಿಲ್ಲ ಎಂದು ಹೇಳಿದ್ದಾರೆ.
ಪ್ರತಿಭಟನೆಗೆ ಅನುಮತಿ ಇರಲಿಲ್ಲ
ಇನ್ನು ಸಂತ್ರಸ್ಥೆ, ಆಕೆಯ ತಾಯಿ ಮತ್ತು ಕಾರ್ಯಕರ್ತೆ-ವಕೀಲರಾದ ಯೋಗಿತಾ ಭಯನಾ ಇಂಡಿಯಾ ಗೇಟ್‌ನಲ್ಲಿ ಪ್ರತಿಭಟನೆ ನಡೆಸಿದ್ದರು, ಅಲ್ಲಿ ಅವರನ್ನು ಪೊಲೀಸರು ಬಂಧಿಸಿದರು. ಈ ಕುರಿತು ಮಾತನಾಡಿರುವ ಅಧಿಕಾರಿಗಳು, 'ಮಂಡಿ ಹೌಸ್ ಅಥವಾ ಇಂಡಿಯಾ ಗೇಟ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗಿರಲಿಲ್ಲ. ಹೀಗಾಗಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಕಾರ್ಯಕರ್ತೆ ಯೋಗಿತಾ ಭಯನಾ, ಸಂತ್ರಸ್ಥೆಯ ಕುಟುಂಬದವರ ವರ್ತನೆಯನ್ನು ಪ್ರಶ್ನಿಸಿದರು. "ಇದು ನ್ಯಾಯವೇ? ಸಂತ್ರಸ್ಥೆ ತಾಯಿಯನ್ನು ರಸ್ತೆಗೆಸೆಯಲಾಗಿದೆ. ಅವರು ಅಳುತ್ತಾ ನಮಗೆ ಕರೆ ಮಾಡುತ್ತಿದ್ದಾರೆ. ಸಂತ್ರಸ್ಥರು ಬಸ್‌ನಲ್ಲಿ ಒಬ್ಬಂಟಿಯಾಗಿದ್ದಾರೆ" ಎಂದು ಹೇಳಿದರು.
'ಉನ್ನಾವ್ ಅಲ್ಲಿ ಮನೆ ಇದೆ': ನಾಯಕನ ವ್ಯಂಗ್ಯ ಉತ್ತರ
ಇನ್ನು ಇದೇ ವೇಳೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಮಿತ್ರಪಕ್ಷ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (SBSP) ಮುಖ್ಯಸ್ಥರಾಗಿರುವ ರಾಜ್‌ಭರ್, ಬೆಳಿಗ್ಗೆ ವಿಧಾನಸಭಾ ಅಧಿವೇಶನಕ್ಕೆ ಹಾಜರಾಗಲು ತೆರಳುತ್ತಿದ್ದಾಗ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿದ್ದಾರೆ.
ದೆಹಲಿಯಲ್ಲಿ ಅತ್ಯಾಚಾರ ಸಂತ್ರಸ್ತೆಯ ಬಗ್ಗೆ ಪೊಲೀಸರ ನಿರಾಸಕ್ತಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನಿಗೆ ಉತ್ತರಿಸಿದ ರಾಜ್‌ಭರ್ ಜೋರಾಗಿ ನಗುತ್ತಾ, "ಇಂಡಿಯಾ ಗೇಟ್? ಘರ್ ತೋ ಉಂಕಾ ಉನ್ನಾವೋ ಹೈ (ಇಂಡಿಯಾ ಗೇಟ್ ಏಕೆ? ಅವಳು ಉನ್ನಾವೋದವಳು)" ಎಂದು ಹೇಳಿದ್ದಾರೆ.
ಅಲ್ಲದೆ "ಸೆಂಗಾರ್ ಕುಟುಂಬದಿಂದ ದೂರವಿರಬೇಕು, 5 ಕಿ.ಮೀ ದೂರ ಕಾಯ್ದುಕೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ನ್ಯಾಯಾಲಯವು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನಗಳನ್ನು ನೀಡಿದಾಗ ದೆಹಲಿಯಲ್ಲಿ ಧರಣಿ ಏಕೆ? ಭದ್ರತೆಯ ಕೊರತೆಯ ಪ್ರಶ್ನೆ ಎಲ್ಲಿದೆ?" ಎಂದು ಪ್ರಶ್ನಿಸಿದ್ದಾರೆ.
ಏನಿದು ಪ್ರಕರಣ?
2017 ರ ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸೆಂಗಾರ್ ಅವರ ಜೈಲು ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ಅಮಾನತುಗೊಳಿಸಿದೆ, ಅವರು ಈಗಾಗಲೇ ಏಳು ವರ್ಷ ಐದು ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ ಎಂದು ಕೋರ್ಟ್ ಹೇಳಿದೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಮತ್ತು ನ್ಯಾಯಮೂರ್ತಿ ಹರೀಶ್ ವೈದ್ಯನಾಥನ್ ಶಂಕರ್ ಅವರ ಪೀಠವು ಸೆಂಗಾರ್ ಅವರಿಗೆ ಹಲವಾರು ಷರತ್ತುಗಳನ್ನು ವಿಧಿಸಿ, 15 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಅದೇ ಮೊತ್ತದ ಮೂವರು ಶ್ಯೂರಿಟಿಗಳನ್ನು ಸಲ್ಲಿಸುವಂತೆ ನಿರ್ದೇಶಿಸಿತು.
Advertisement