

ನವದೆಹಲಿ: ಅಮೆರಿಕಾದ ಸಂವಹನ ಉಪಗ್ರಹ 'ಬ್ಲೂಬರ್ಡ್ ಬ್ಲಾಕ್–2' ಅನ್ನು ಇಸ್ರೊದ ಅತ್ಯಂತ ಭಾರವಾದ ಎಲ್‌ವಿಎಂ3–ಎಂ6 ರಾಕೆಟ್ ನಭಕ್ಕೆ ಹೊತ್ತೊಯ್ಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದ್ದು, ಇದರ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊಂಡಾಡಿದ್ದಾರೆ.
ಬ್ಲೂಬರ್ಡ್ -2 ಯಶಸ್ವಿ ಉಡಾವಣೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಂಚಿಕೊಂಡಿದ್ದು, ಇಸ್ರೋ ಸಾಧನೆಯನ್ನು ಶ್ಲಾಘಿಸಿದ್ದಾರೆ. ಇದು ಭಾರತದ ಬಾಹ್ಯಾಕಾಶ ಕ್ಷೇತ್ರದ ಒಂದು ಪ್ರಮುಖ ಸಾಧನೆಯಾಗಿದೆ ಎಂದು ಹೇಳಿದ್ದಾರೆ.
ಇದರೊಂದಿಗೆ ದೇಶದ ಅತಿ ಭಾರದ ಉಡ್ಡಯನ ಸಾಮರ್ಥ್ಯವನ್ನು ಮತ್ತಷ್ಟು ಬಲಗೊಳಿಸಿದೆ. ಜಾಗತಿಕ ವಾಣಿಜ್ಯ ಉಡ್ಡಯನ ಮಾರುಕಟ್ಟೆಯಲ್ಲಿ ನಮ್ಮ ಪ್ರಗತಿಯನ್ನು ಬಲಿಷ್ಠಗೊಳಿಸುತ್ತಿದೆ ಎಂದು ತಿಳಿಸಿದ್ದಾರೆ.
'ಆತ್ಮನಿರ್ಭರ ಭಾರತ' ಉಪಕ್ರಮದತ್ತ ನಮ್ಮ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಇದರ ಹಿಂದೆ ಶ್ರಮ ವಹಿಸಿರುವ ನಮ್ಮ ಬಾಹ್ಯಾಕಾಶ ವಿಜ್ಞಾನಿಗಳು ಹಾಗೂ ಎಂಜಿನಿಯರ್‌ಗಳಿಗೆ ಅಭಿನಂದನೆಗಳು. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಲೇ ಇದೆ.
ಯುವಜನರ ಪ್ರಯತ್ನದಿಂದ ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ಹೆಚ್ಚು ಪರಿಣಾಮಕಾರಿಯೆನಿಸಿದೆ. ಅತಿ ಭಾರದ ಎಲ್‌ವಿಎಂ3 ಯೋಜನೆಯೊಂದಿಗೆ ಗಗನಯಾನದಂತಹ ಭವಿಷ್ಯದ ಕಾರ್ಯಕ್ರಮಗಳಿಗೆ ಹೆಚ್ಚಿನ ಉತ್ತೇಜನ ಸಿಗುತ್ತದೆ ಎಂದು ಹೇಳಿದ್ದಾರೆ.
Advertisement