

ಬಿಜೆಪಿ ನಾಯಕಿ ನವನೀತ್ ರಾಣಾ ಅವರು ದೇಶದ ಹಿಂದೂ ಜನರಲ್ಲಿ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ದೇಶದ ಜನಸಂಖ್ಯಾ ರಚನೆಯು ಪಾಕಿಸ್ತಾನದಂತೆ ಬದಲಾಗದಿರಲು ಹಿಂದೂಗಳು ಕನಿಷ್ಠ ಮೂರರಿಂದ ನಾಲ್ಕು ಮಕ್ಕಳನ್ನು ಹೊಂದುವಂತೆ ಕೇಳಿಕೊಂಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡುತ್ತಿರುವ ಸಂದರ್ಭದಲ್ಲಿ ನವನೀತ್ ರಾಣಾ, ಕೆಲವರು ನಮ್ಮ ದೇಶದಲ್ಲಿ ಬಹು ಪತ್ನಿಯರು ಮತ್ತು ಹಲವಾರು ಮಕ್ಕಳನ್ನು ಹೊಂದಿದ್ದಾರೆ, ಇದರಿಂದಾಗಿ ಅವರ ಜನಸಂಖ್ಯೆಯು ಬೆಳೆಯುತ್ತಾ ಹೋಗುತ್ತಿದೆ, ಅವರನ್ನು ಸೋಲಿಸಲು, ಹಿಂದೂಸ್ತಾನವನ್ನು ರಕ್ಷಿಸಲು ಹಿಂದೂಗಳು ಕನಿಷ್ಠ ಮೂರರಿಂದ ನಾಲ್ಕು ಮಕ್ಕಳನ್ನು ಹೊಂದಬೇಕೆಂದು ಒತ್ತಾಯಿಸಿದರು.
ನಾನು ಎಲ್ಲಾ ಹಿಂದೂಗಳಲ್ಲಿ ಮನವಿ ಮಾಡುತ್ತೇನೆ. ಕೇಳಿ, ಈ ಜನರು ತಮಗೆ ನಾಲ್ಕು ಹೆಂಡತಿಯರು ಮತ್ತು 19 ಮಕ್ಕಳಿದ್ದಾರೆ ಎಂದು ಬಹಿರಂಗವಾಗಿ ಹೇಳುತ್ತಾರೆ. ಹೀಗಿರುವಾಗ ನಾವು ಹಿಂದೂಗಳು ಕನಿಷ್ಠ ಮೂರರಿಂದ ನಾಲ್ಕು ಮಕ್ಕಳಿಗೆ ಜನ್ಮ ನೀಡಬೇಕೆಂದು ನಾನು ಸೂಚಿಸುತ್ತೇನೆ ಎಂದರು.
ಅವರು ಮೌಲಾನಾಗಳೋ ಅಥವಾ ಬೇರೆಯವರೋ ನನಗೆ ಗೊತ್ತಿಲ್ಲ, ಆದರೆ ಅವರು 19 ಮಕ್ಕಳು, ನಾಲ್ಕು ಪತ್ನಿಯರನ್ನು ಹೊಂದಿದ್ದಾರೆಂದು ಹೇಳಿದರು. ಆದರೆ ಅವರು 30 ಮಕ್ಕಳ ಕೋರಂ ನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅವರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಹಿಂದೂಸ್ತಾನವನ್ನು ಪಾಕಿಸ್ತಾನವನ್ನಾಗಿ ಮಾಡಲು ಹೊರಟಿದ್ದಾರೆ. ಹೀಗಿರುವಾಗ ಹಿಂದೂಸ್ತಾನದಲ್ಲಿರುವ ನಾವು ಹಿಂದೂ ಜನರು ಕೇವಲ ಒಂದು ಮಗುವಿಗೆ ಏಕೆ ತೃಪ್ತರಾಗಬೇಕು, ನಾವು ಮೂರರಿಂದ ನಾಲ್ಕು ಮಕ್ಕಳಿಗೆ ಜನ್ಮ ನೀಡಬೇಕು ಎಂದರು.
ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿಯು ಇಂತಹ ಹುಚ್ಚು ಚಿಂತನೆಯನ್ನು ಕೊನೆಗೊಳಿಸಬೇಕೆಂದು ಹೇಳಿದರು.
ನಾವು ಸಂಖ್ಯೆಯಲ್ಲಿ ವೈಜ್ಞಾನಿಕವಾಗಿರಬೇಕು, ಅಂತಹ ಮೂಢನಂಬಿಕೆ ಅಥವಾ ಅವೈಜ್ಞಾನಿಕ ವಿಧಾನವನ್ನು ಹೊಂದಿರಬಾರದು. ಭಾರತದ ಜನಸಂಖ್ಯಾ ಬೆಳವಣಿಗೆಯು ಆತಂಕಕಾರಿ ಕಥೆಯಾಗಿದೆ. ಜನಸಂಖ್ಯೆಯನ್ನು ಸ್ಥಿರಗೊಳಿಸಲು ಸಾಧ್ಯವಾಗದೆ ರಾಜ್ಯಗಳು ಬಳಲುತ್ತಿವೆ. ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಇಂತಹ ಹುಚ್ಚು ಚಿಂತನೆ ಕೊನೆಗೊಳ್ಳಬೇಕು ಎಂದು ಹೇಳಿದರು.
ಭಾರತದ ಜನಸಂಖ್ಯೆಯು ಸ್ಥಿರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಜನನ ಪ್ರಮಾಣದಲ್ಲಿನ ಕುಸಿತವನ್ನು ತಡೆಯಲು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕೆಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಹಲವಾರು ಸಂದರ್ಭಗಳಲ್ಲಿ ಭಾರತೀಯರನ್ನು ಒತ್ತಾಯಿಸಿದ್ದಾರೆ.
Advertisement