Udaipur Gangrape: ಮೈ ಮೇಲೆ ಗಾಯ, ಒಳ ಉಡುಪು ನಾಪತ್ತೆ..: ಅತ್ಯಾಚಾರ ಪ್ರಕರಣದ ಸ್ಫೋಟಕ ಮಾಹಿತಿ!
ಜೈಪುರ: ರಾಜಸ್ಥಾನದ ಉದಯಪುರದಲ್ಲಿ ಕಾರಿನಲ್ಲಿ ಐಟಿ ಸಂಸ್ಥೆಯ ಮಹಿಳಾ ವ್ಯವಸ್ಥಾಪಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯ ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ.
ಡಿಸೆಂಬರ್ 20 ರಂದು ಈ ಘಟನೆ ನಡೆದಿದ್ದು, ಜಿಕೆಎಂ ಐಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜಿತೇಶ್ ಪ್ರಕಾಶ್ ಸಿಸೋಡಿಯಾ; ಸಂಸ್ಥೆಯ ಮಹಿಳಾ ಕಾರ್ಯನಿರ್ವಾಹಕ ಮುಖ್ಯಸ್ಥೆ ಶಿಲ್ಪಾ ಸಿರೋಹಿ; ಮತ್ತು ಅವರ ಪತಿ ಗೌರವ್ ಸಿರೋಹಿ ಅವರನ್ನು ಬಂಧಿಸಲಾಗಿದೆ.
ಪೊಲೀಸ್ ದೂರಿನಲ್ಲಿ, ಜಿತೇಶ್, ಶಿಲ್ಪಾ ಮತ್ತು ಗೌರವ್ ಸಾಮೂಹಿಕವಾಗಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಅತ್ಯಾಚಾರವನ್ನು ದೃಢಪಡಿಸಿದ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ, ಸಂತ್ರಸ್ತೆಗೆ ಗಾಯಗಳಾಗಿದ್ದು, ಆಕೆಯ ಖಾಸಗಿ ಭಾಗಗಳು ಮತ್ತು ದೇಹದ ಇತರ ಭಾಗಗಳಲ್ಲಿ ನೋವು ಅನುಭವಿಸಲಾಗಿದೆ ಎಂದು ತಿಳಿದುಬಂದಿದೆ.
ಆಕೆಯ ಕೆಲವು ಆಭರಣಗಳು, ಸಾಕ್ಸ್ ಮತ್ತು ಒಳ ಉಡುಪುಗಳು ಕಾಣೆಯಾಗಿವೆ ಎಂದು ಸಂತ್ರಸ್ತೆ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಅಂದು ಏನಾಯಿತು?
ಡಿಸೆಂಬರ್ 20 ರಂದು, ಉದಯಪುರದ ಶೋಬಾಗ್‌ಪುರದ ಹೋಟೆಲ್‌ನಲ್ಲಿ ಸಿಸೋಡಿಯಾ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಂತ್ರಸ್ಥೆ ಭಾಗವಹಿಸಿದ್ದರು. ಪಾರ್ಟಿ ರಾತ್ರಿ 9 ಗಂಟೆಗೆ ಪ್ರಾರಂಭವಾಗಿ ಮಧ್ಯರಾತ್ರಿ 1.30 ರವರೆಗೆ ನಡೆಯಿತು.
ಸಂತ್ರಸ್ಥೆ ಸೇರಿದಂತೆ ಸಭೆಯಲ್ಲಿದ್ದ ಎಲ್ಲರೂ ಮದ್ಯ ಸೇವಿಸಿದ್ದರು. ಮಧ್ಯರಾತ್ರಿ 1.30 ರ ಸುಮಾರಿಗೆ, ಜಿತೇಶ್ ಸಿಸೋಡಿಯಾ, ಶಿಪ್ಲಾ ಸಿರೋಹಿ ಮತ್ತು ಗೌರವ್ ಸಿರೋಹಿ ಮ್ಯಾನೇಜರ್‌ಗೆ ಮನೆಗೆ ಹಿಂತಿರುಗಲು ಅವಕಾಶ ನೀಡಿದರು.
ಗೌರವ್ ಕಾರನ್ನು ಚಾಲನೆ ಮಾಡುತ್ತಿದ್ದಾಗ, ಶಿಲ್ಪಾ, ಜಿತೇಶ್ ಮತ್ತು ಸಂತ್ರಸ್ಥೆ ಹಿಂಭಾಗದಲ್ಲಿ ಕುಳಿತಿದ್ದರು. ಕಾರು ಆರೋಪಿಗಳಲ್ಲಿ ಒಬ್ಬರಿಗೆ ಸೇರಿದ್ದಾಗಿತ್ತು.
ಪ್ರಯಾಣದ ಸಮಯದಲ್ಲಿ, ಆರೋಪಿ ಅಂಗಡಿಯಿಂದ ಸಿಗರೇಟ್ ಖರೀದಿಸಲು ವಾಹನವನ್ನು ನಿಲ್ಲಿಸಿ ವ್ಯವಸ್ಥಾಪಕರಿಗೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅದನ್ನು ಸೇವಿಸಿದ ನಂತರ ಆಕೆ ಪ್ರಜ್ಞಾಹೀನಳಾಗಿದ್ದಾಳೆ ಎನ್ನಲಾಗಿದೆ.
ಡ್ಯಾಶ್‌ಕ್ಯಾಮ್ ಕೃತ್ಯ ಸೆರೆ
ಇನ್ನು ಸಂತ್ರಸ್ಥೆ ಪ್ರಜ್ಞೆ ಮರಳಿದ ನಂತರ, ತನ್ನ ಮೈಮೇಲೆ ಗಾಯಗಳನ್ನು ಗಮನಿಸಿದ್ದಾಳೆ. ಇದರಿಂದ ಅನುಮಾನಗೊಂಡ ಆಕೆ ಕಾರಿನ ಡ್ಯಾಶ್‌ಕ್ಯಾಮ್ ಅನ್ನು ಪರಿಶೀಲಿಸಿದಳು. ಈ ವೇಳೆ ಅಲ್ಲಿ ನಡೆದ ಹೀನಾಯ ಕೃತ್ಯ ಬಯಲಾಗಿತ್ತು.
ಅದು ಇಡೀ ಅಪರಾಧವನ್ನು ಮತ್ತು ಆರೋಪಿಗಳ ನಡುವಿನ ಸಂಭಾಷಣೆಯನ್ನು ದಾಖಲಿಸಿತ್ತು. ಮಹಿಳೆ ಈ ಪುರಾವೆಗಳೊಂದಿಗೆ ಪೊಲೀಸರನ್ನು ಸಂಪರ್ಕಿಸಿ ಡಿಸೆಂಬರ್ 23 ರಂದು ದೂರು ದಾಖಲಿಸಿದಳು. ಸಂತ್ರಸ್ಥೆಯ ದೂರು ಮತ್ತು ವೈದ್ಯಕೀಯ ಪರೀಕ್ಷಾ ವರದಿಯ ಆಧಾರದ ಮೇಲೆ, ಪೊಲೀಸರು ಸಿಸೋಡಿಯಾ, ಶಿಲ್ಪಾ ಮತ್ತು ಗೌರವ್ ಅವರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಾಲ್ಕು ದಿನಗಳ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ವಿವರವಾದ ತನಿಖೆ ಪ್ರಸ್ತುತ ನಡೆಯುತ್ತಿದೆ.

