

ನವದೆಹಲಿ: ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಗುದ್ದಾಟ ಮುಂದುವರೆದಿರುವಂತೆಯೇ ರಾಷ್ಟ್ರ ರಾಜಧಾನಿಯಲ್ಲಿ 'ದಲಿತ ಸಿಎಂ' ಕೂಗು ಕೇಳಿಬಂದಿದೆ.
ಒಂದು ವೇಳೆ ನಾಯಕತ್ವ ಮಾಡುವುದಾದರೆ ದಲಿತರಿಗೆ ಅದರಲ್ಲೂ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಪ್ರದಾನ ಕಚೇರಿ ಮುಂಬೆ ಸುಮಾರು ಒಂದು ಡಜನ್ ಗೂ ಹೆಚ್ಚು ಮಂದಿ ಶನಿವಾರ ಪ್ರತಿಭಟನೆ ನಡೆಸಿದರು.
ಇಂದಿರಾ ಭವನದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿರುವಾಗ ಬಾಬಾ ಸಾಹೇಬ್ ಅಂಬೇಡ್ಕರ್ ದಲಿತ ಸೇವಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸಿಎಂ ಸಿದ್ದರಾಮಯ್ಯ ಕೂಡಾ ಸಭೆಯಲ್ಲಿ ಪಾಲ್ಗೊಂಡಿದ್ದರು.
ದಲಿತ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆಗಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಭಾವಚಿತ್ರ ಒಳಗೊಂಡ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಲಾಯಿತು. ಸಂಸದ ತೋಲ್ ತಿರುಮಾವಳವನ್ ಕೂಡಾ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನಾ ಕಾಂಗ್ರೆಸ್ ಸಂಘಟನ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರನ್ನು ಭೇಟಿಯಾದ ಸದಸ್ಯರು, ಡಾ. ಜಿ.ಪರಮೇಶ್ವರ್‌ಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಅಲ್ಲದೇ ಸೋನಿಯ ಗಾಂಧಿ ಅವರ ನಿವಾಸಕ್ಕೂ ಮನವಿ ಪತ್ರವನ್ನು ರವಾನಿಸಿದರು.
ಎಐಸಿಸಿ ಕಚೇರಿ ಬಳಿ ಮಾತನಾಡಿದ ಸದಸ್ಯರು, ದಲಿತ ಸಮುದಾಯ ದಶಕಗಳಿಂದ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಾ ಬಂದಿದೆ. ಹೀಗಾಗಿ, ದಲಿತ ನಾಯಕರಿಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಜಿ.ಪರಮೇಶ್ವರ್ ಪಕ್ಷನಿಷ್ಠರಾಗಿ ಕೆಲಸ ಮಾಡುತ್ತಿದ್ದಾರೆ. 2013 ರಲ್ಲಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ 122 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ದಲಿತರು ಕಾಂಗ್ರೆಸ್ ಪರವಾಗಿ ನಿಂತಿದ್ದಾರೆ. ಈ ಹಿನ್ನೆಲೆ ದಲಿತರಿಗೆ ಸಿಎಂ ಸ್ಥಾನ ನೀಡುವ ಮೂಲಕ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.
Advertisement