

ನವಿ ಮುಂಬೈ: ಮಹಾರಾಷ್ಟ್ರದಲ್ಲಿ ಭಾಷಾ ವಿವಾದ ಹೊಸ ಆಯಾಮ ಪಡೆದುಕೊಳ್ಳುತ್ತಿದ್ದು, ಸರಿಯಾಗಿ ಮರಾಠಿ ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ತನ್ನ ಆರು ವರ್ಷದ ಮಗಳ ಕತ್ತು ಹಿಸುಕಿ ಕೊಂದಿರುವ ಅಮಾನವೀಯ ಘಟನೆ ನಡೆದಿದೆ.
ಸುದೀರ್ಘ ವಿಚಾರಣೆಯ ನಂತರ ಮಹಿಳೆ ಪೊಲೀಸರಿಗೆ ನೀಡಿದ ಕಾರಣ ಇದೇ ಆಗಿದ್ದರೂ, ತನಗೆ ಮಗ ಇಲ್ಲದೆ, ಮಗಳಿದ್ದ ಬಗ್ಗೆ ಎಂಬ ಅತೃಪ್ತಿ ಇತ್ತು.ಇನ್ನಿತರ ಮಾನಸಿಕ ಸಮಸ್ಯೆಗಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ನವಿ ಮುಂಬೈನ ಕಲಾಂಬೋಲಿಯಲ್ಲಿ ವಾಸಿಸುವ 30 ವರ್ಷದ ಮಹಿಳೆ ಹೃದಯಾಘಾತದಿಂದ ಮಗಳು ಸಾವನ್ನಪ್ಪಿದ್ದಾಳೆ ಎಂದು ಕಟ್ಟುಕಥೆ ಕಟ್ಟಲು ಯೋಜಿಸಿದ್ದಳು. ಆದರೆ, ಪೊಲೀಸ್ ಅಧಿಕಾರಿಯೊಬ್ಬರು ಇದನ್ನು ವಿಫಲಗೊಳಿಸಿದ್ದು, ಸಾವಿಗೆ ನಿಜವಾದ ಕಾರಣವನ್ನು ಪತ್ತೆಹಚ್ಚಿದ್ದಾರೆ.
ಮಂಗಳವಾರ ಮಹಿಳೆ ತನ್ನ ಮಗಳನ್ನು ಕೊಂದಿದ್ದಾಳೆ. ಬಾಲಕಿಯ ಅಜ್ಜಿ ಕೂಡ ಅದೇ ದಿನ ಮನೆಗೆ ಭೇಟಿ ನೀಡಿದ್ದರು, ಆದರೆ ಆಕೆಯನ್ನು ಭೇಟಿಯಾಗಲು ಸಾಧ್ಯವಾಗದ ಕಾರಣ ಅಲ್ಲಿಂದ ತೆರಳಿದ್ದರು. ಆ ದಿನ ಸಂಜೆ ಮಹಿಳೆಯ ಪತಿ ಮನೆಗೆ ಮರಳಿದಾಗ ಮಗು ಪ್ರಜ್ಞೆ ಕಳೆದುಕೊಂಡಂತೆ ಕಂಡುಬಂದಿದೆ. ತದನಂತರ ಆಸ್ಪತ್ರೆಗೆ ಸಾಗಿಸಿದಾಗ ಆರಂಭದಲ್ಲಿ ಮಹಿಳೆ, ಆರು ವರ್ಷದ ಮಗಳಿಗೆ ಹೃದಯಾಘಾತವಾಗಿದೆ ಎಂದು ಹೇಳಿದರು. ಆದರೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ
ಕಲಂಬೋಲಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಂದ್ರ ಕೋಟೆ ವಿಶೇಷ ಮರಣೋತ್ತರ ಪರೀಕ್ಷೆಗೆ ಮನವಿ ಮಾಡಿದ್ದಾರೆ. ಪ್ರಾಥಮಿಕ ವರದಿಯಲ್ಲಿ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ಕಂಡುಬಂದಿದೆ. ನಂತರ ಪೋಷಕರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಆರು ಗಂಟೆಗಳ ವಿಚಾರಣೆಯ ನಂತರ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ. ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ವಿಜ್ಞಾನ ಪದವೀಧರೆಯಾಗಿದ್ದು, ಅವರ ಪತಿ ಐಟಿ ಎಂಜಿನಿಯರ್ ಆಗಿದ್ದು, 2017 ರಲ್ಲಿ ವಿವಾಹವಾಗಿದ್ದರು. ಎರಡು ವರ್ಷಗಳ ನಂತರ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು.
ಬಾಲಕಿಗೆ ಚಿಕ್ಕ ವಯಸ್ಸಿನಿಂದಲೂ ಮರಾಠಿ ಮಾತನಾಡಲು ಕಷ್ಟವಾಗುತ್ತಿತ್ತು. ಮರಾಠಿ ಬದಲಿಗೆ ಹೆಚ್ಚಾಗಿ ಹಿಂದಿ ಮಾತನಾಡುತ್ತಿದ್ದಳು. ಇದು ತಾಯಿಯ ಕೋಪಕ್ಕೆ ಕಾರಣವಾಯಿತು. ನನಗೆ ಅಂತಹ ಮಗು ಬೇಡ; ಅವಳು ಸರಿಯಾಗಿ ಮಾತನಾಡುವುದಿಲ್ಲ ಎಂದು ಗಂಡನಿಗೆ ಪದೇ ಪದೇ ಹೇಳಿದ್ದರು.ಗಂಡು ಮಗು ಬಯಸಿದ್ದ ಮಹಿಳೆಗೆ ಹೆಣ್ಣು ಮಗುವಾದಾಗ ಆತೃಪ್ತಿ ಹೊಂದಿದ್ದಳು. ಅಲ್ಲದೇ ಆಕೆ ಮಾನಸಿಕ ಸಮಸ್ಯೆಗಳಿಂದ ನರಳುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಳು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement