

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ಭಾನುವಾರ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಶವವಾಗಿ ಪತ್ತೆಯಾಗಿದ್ದು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಗೆ ಸಂಬಂಧಿಸಿದ ಒತ್ತಡವು ಇದರಲ್ಲಿ ಪಾತ್ರ ವಹಿಸಿರಬಹುದು ಎಂಬ ಆರೋಪ ಕೇಳಿಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಣಿಬಂಧ್ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದ್ದು, ಭಾನುವಾರ ಬೆಳಿಗ್ಗೆ ಶಾಲಾ ಆವರಣದಲ್ಲಿ ಹರಧನ್ ಮಂಡಲ್ ಎಂಬುವವರ ಶವ ಪತ್ತೆಯಾಗಿದೆ.
'ಮಂಡಲ್ ವೃತ್ತಿಯಲ್ಲಿ ಶಾಲಾ ಶಿಕ್ಷಕರಾಗಿದ್ದರು ಮತ್ತು ರಾಣಿಬಂಧ್ ಬ್ಲಾಕ್‌ನ ರಾಜಕಟಾ ಪ್ರದೇಶದ ಬೂತ್ ಸಂಖ್ಯೆ 206ರ ಬಿಎಲ್‌ಒ ಆಗಿ ಸೇವೆ ಸಲ್ಲಿಸುತ್ತಿದ್ದರು' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧಿಕಾರಿಯ ಪ್ರಕಾರ, ಮೃತರ ಸಹಿಯನ್ನು ಹೊಂದಿರುವ ಒಂದು ಟಿಪ್ಪಣಿ ಸ್ಥಳದಲ್ಲಿ ಪತ್ತೆಯಾಗಿದ್ದು, ಅದರಲ್ಲಿ ಅವರು ಕೆಲಸದ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
'ನಾವು ಟಿಪ್ಪಣಿಯನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ' ಎಂದು ಅವರು ಹೇಳಿದರು.
ಮಂಡಲ್ ಸಾವಿಗೆ ಕಾರಣ ಏನೆಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದು, ಎಲ್ಲ ದೃಷ್ಟಿಕೋನಗಳಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಇಲ್ಲಿಯವರೆಗೆ, ನಾಲ್ವರು ಬಿಎಲ್‌ಒಗಳು ಸೇರಿದಂತೆ 39 ಸಾಮಾನ್ಯ ನಾಗರಿಕರು ಎಸ್‌ಐಆರ್ ಭೀತಿಯಿಂದ ಸಾವಿಗೀಡಾಗಿದ್ದಾರೆ. ಅದರಲ್ಲಿ ಆತ್ಮಹತ್ಯೆಗಳೂ ಸೇರಿವೆ' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಡಿಸೆಂಬರ್ 2 ರಂದು ಹೇಳಿಕೊಂಡಿದ್ದರು.
ರಾಜ್ಯದಲ್ಲಿ ಎಸ್‌ಐಆರ್ ಅಭಿಯಾನ ವೆಂಬರ್ 4 ರಂದು ಪ್ರಾರಂಭವಾಯಿತು.
Advertisement