

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಬೆಳಗ್ಗೆ ಮತ್ತೊಮ್ಮೆ ದಟ್ಟವಾದ ಮಂಜು ಆವೃತವಾಗಿದ್ದು, ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿದೆ. ದೆಹಲಿಯಲ್ಲಿ ಇಂದು ದಟ್ಟವಾದ ಮಂಜು ಆವರಿಸಿದ್ದರಿಂದ ಕನಿಷ್ಠ 120 ವಿಮಾನಗಳು ರದ್ದಾಗಿವೆ.
ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ(AQI) 402 ಇಳಿದಿದ್ದು, ನಗರದ ಗಾಳಿಯ ಗುಣಮಟ್ಟ 'ಗಂಭೀರ'ವಾಗಿದೆ.
ರಾಷ್ಟ್ರ ರಾಜಧಾನಿಯಾದ್ಯಂತ ಒಟ್ಟು 40 ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳಲ್ಲಿ, 22 ಕಡೆ 'ಗಂಭೀರ' ಗಾಳಿಯ ಗುಣಮಟ್ಟ ವರದಿ ಮಾಡಿದರೆ, 14 ಕೇಂದ್ರಗಳು 'ತುಂಬಾ ಕಳಪೆ' ಮಟ್ಟವನ್ನು ದಾಖಲಿಸಿವೆ. ಆದರೆ ಮೂರು ಕೇಂದ್ರಗಳ ಡೇಟಾ ಲಭ್ಯವಿಲ್ಲ.
ಪಿಟಿಐ ವರದಿ ಮಾಡಿದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ದತ್ತಾಂಶದ ಪ್ರಕಾರ, ಪೂರ್ವ ದೆಹಲಿಯ ವಿವೇಕ್ ವಿಹಾರ್ 456 ರ AQI ಯೊಂದಿಗೆ ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟವನ್ನು ವರದಿ ಮಾಡಿದೆ.
ಸಿಪಿಸಿಬಿ ಮಾನದಂಡಗಳ ಪ್ರಕಾರ, 401 ಮತ್ತು 500 ರ ನಡುವಿನ ವಾಯು ಗುಣಮಟ್ಟ ಗಂಭೀರ ವರ್ಗಕ್ಕೆ ಸೇರುತ್ತದೆ, ಇದು ಗಂಭೀರ ಆರೋಗ್ಯ ಅಪಾಯಗಳನ್ನುಂಟುಮಾಡುತ್ತದೆ.
ಮುಂದಿನ ಮೂರು ದಿನಗಳಲ್ಲಿ ನಗರದ ಗಾಳಿಯ ಗುಣಮಟ್ಟವು ತುಂಬಾ ಕಳಪೆಯಾಗಿ ಉಳಿಯುವ ನಿರೀಕ್ಷೆಯಿದೆ. ಮುಂದಿನ ಆರು ದಿನಗಳಲ್ಲಿ ಪರಿಸ್ಥಿತಿ ತುಂಬಾ ಕಳಪೆ ಮತ್ತು ಗಂಭೀರ ನಡುವೆ ಏರಿಳಿತಗೊಳ್ಳುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಕನಿಷ್ಠ ತಾಪಮಾನವು ಸಾಮಾನ್ಯಕ್ಕೆ ಹತ್ತಿರದಲ್ಲಿಯೇ ಉಳಿಯುವ ನಿರೀಕ್ಷೆಯಿದೆ. ಆದರೆ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ದೆಹಲಿಯಲ್ಲಿ ಗರಿಷ್ಠ ತಾಪಮಾನವು 22°C ಮತ್ತು 24°C ನಡುವೆ ಮತ್ತು ಕನಿಷ್ಠ ತಾಪಮಾನವು 7°C ಮತ್ತು 9°C ನಡುವೆ ದಾಖಲಾಗುವ ಸಾಧ್ಯತೆಯಿದೆ.
128 ವಿಮಾನಗಳನ್ನು ರದ್ದು
ಹದಗೆಡುತ್ತಿರುವ ಹವಾಮಾನ ಪರಿಸ್ಥಿತಿಯಿಂದಾಗಿ ದೆಹಲಿ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಮತ್ತು ಆಗಮಿಸುವ ಕನಿಷ್ಠ 128 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಮತ್ತು ಎಂಟು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಅಲ್ಲದೆ ಸುಮಾರು 200 ವಿಮಾನಗಳ ಸೇವೆ ವಿಳಂಬವಾಗಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟವಾದ ಮಂಜು ಮತ್ತು ಕಡಿಮೆ ಗೋಚರತೆಯ ಪರಿಸ್ಥಿತಿಗಳಿಂದಾಗಿ 64 ನಿರ್ಗಮನ ಮತ್ತು 64 ಆಗಮನ ವಿಮಾನಗಳನ್ನು ರದ್ದುಗೊಳಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement