

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ಸೋಮವಾರ ಭಾರತ ಸರ್ಕಾರಕ್ಕೆ ಕ್ಷಮೆಯಾಚಿಸಿದ್ದಾರೆ.
ಇತ್ತೀಚಿಗೆ ಲಂಡನ್‌ನಲ್ಲಿ ವಿಜಯ್ ಮಲ್ಯ ಅವರ ಅದ್ದೂರಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದ ಲಲಿತ್ ಮೋದಿ, ನಾವಿಬ್ಬರೂ ಅತಿದೊಡ್ಡ ದೇಶಭ್ರಷ್ಟ ಎಂದು ವ್ಯಂಗ್ಯ ಮಾಡಿದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು.
ಈ ವಿಡಿಯೋ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಭಾರತ ಸರ್ಕಾರವನ್ನು ಅಣಕಿಸಿ ಮಾಡಿದ್ದ ವಿಡಿಯೋ ನೆಟ್ಟಿಗರನ್ನು ಕೆರಳಿಸಿತ್ತು.
ಇದಾದ ಕೆಲವು ದಿನಗಳ ಬಳಿಕ ಇದೀಗ ಲಲಿತ್ ಮೋದಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಯಾರ ಭಾವನೆಗಳನ್ನು ವಿಶೇಷವಾಗಿ ಭಾರತ ಸರ್ಕಾರದ ಭಾವನೆಗಳನ್ನು ನೋಯಿಸುವ ಉದ್ದೇಶ ಹೊಂದಿಲ್ಲ. ಸರ್ಕಾರವನ್ನು ತುಂಬಾ ಗೌರವಿಸುತ್ತೇನೆ. ನನ್ನ ಹಿಂದಿನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ಯಾವ ಕಾರಣಕ್ಕೆ ಕ್ಷಮೆಯಾಚಿಸುತ್ತಿದ್ದೇನೆ ಎಂಬುದನ್ನು ಬಹಿರಂಗಪಡಿಸಿಲ್ಲ.
ಐಪಿಎಲ್ ಗೆ ಸಂಬಂಧಿಸಿದ ಹಣಕಾಸಿನ ಅಕ್ರಮ ಆರೋಪದ ನಡುವೆ ಲಲಿತ್ ಮೋದಿ 2010ರಲ್ಲಿ ಭಾರತವನ್ನು ತೊರೆದಿದ್ದರೆ, ಎಸ್ ಬಿಐ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ಹಣ ಸಾಲ ಮರು ಪಾವತಿಸದೆ ವಿಜಯ್ ಮಲ್ಯ 2016ರಿಂದ ವಿದೇಶದಲ್ಲಿದ್ದಾರೆ.
Advertisement