ಕೇಂದ್ರ ಬಜೆಟ್ 2025: ಮಹಿಳೆಯರು, SC-ST ಉದ್ಯಮಿಗಳಿಗೆ 2 ಕೋಟಿ ರೂ ವರೆಗೆ ಅವಧಿ ಸಾಲ
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ 2025-26ರ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ದೊಡ್ಡ ಕೈಗಾರಿಕೆಗಳಿಗೆ ಉತ್ಪಾದನಾ ಮಿಷನ್ ಸ್ಥಾಪಿಸಲಾಗುವುದು ಎಂದು ಹೇಳಿದರು.
ಇದಲ್ಲದೆ, ಕಾರ್ಮಿಕ- ವಲಯಗಳ ಉತ್ಪಾದಕತೆಯನ್ನು ಹೆಚ್ಚಿಸಲು ಸರ್ಕಾರವು ಹಲವು ಸೌಲಭ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದರು. ಉದ್ಯಮ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರನ್ನು ಉತ್ತೇಜಿಸುವ ಸಲುವಾಗಿ ಹೊಸ ಯೋಜನೆ ಜಾರಿಗೊಳಿಸಲಾಗುವುದು. ಐದು ಲಕ್ಷ ಮಹಿಳೆಯರು, ಎಸ್‌ಸಿ, ಎಸ್‌ಟಿ ಉದ್ಯಮಿಗಳಿಗೆ ಸರ್ಕಾರವು 2 ಕೋಟಿ ರೂ.ಗಳ ಅವಧಿ ಸಾಲವನ್ನು ಪ್ರಾರಂಭಿಸಲಿದೆ.
ಇದರಿಂದ 22 ಲಕ್ಷ ಉದ್ದಿಮೆದಾರರಿಗೆ ಅನುಕೂಲವಾಗಲಿದೆ. ಚರ್ಮೋದ್ಯಮನ್ನು ಉತ್ತೇಜಿಸಿ ರಫ್ತು ಹೆಚ್ಚಿಸುವತ್ತ ಗಮನ ಹರಿಸಲಾಗುವುದು. ಆ ಮೂಲಕ ಮೇಡ್ ಇನ್ ಇಂಡಿಯಾ ಬ್ರ್ಯಾಂಡ್ ಉತ್ತೇಜಿಸಲಾಗುವುದು. ಮೊದಲ ಬಾರಿಗೆ ಉದ್ಯಮ ಶುರು ಮಾಡುವವರಿಗೆ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕ್ರೆಡಿಟ್ ಗ್ಯಾರಂಟಿ ಕವರ್ ಅನ್ನು 20 ಕೋಟಿ ರೂ.ಗಳಿಗೆ ದ್ವಿಗುಣಗೊಳಿಸಲಾಗುತ್ತದೆ, ಗ್ಯಾರಂಟಿ ಶುಲ್ಕವನ್ನು ಶೇಕಡಾ 1 ಕ್ಕೆ ಇಳಿಸಲಾಗುತ್ತದೆ ಎಂದು ಅವರು ಹೇಳಿದರು. ಬಿಹಾರದಲ್ಲಿ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣೆಯ ರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ