
ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ತಾವು ಮಂಡಿಸಿದ ಕೇಂದ್ರ ಬಜೆಟ್ 2025ರಲ್ಲಿ ಗಿಗ್ ಕಾರ್ಮಿಕರಿಗೆ ಮಹತ್ವದ ಅಂಶ ಮಂಡಿಸಿದ್ದು, 1 ಕೋಟಿ ಗಿಗ್ ಕಾರ್ಮಿಕರಿಗೆ ಸಹಾಯ ಮಾಡಲು ಸರ್ಕಾರ ಗುರುತಿನ ಚೀಟಿಗಳು ಮತ್ತು ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ ವ್ಯವಸ್ಥೆ ಮಾಡಲಿದೆ ಎಂದು ಹೇಳಿದರು.
ಶನಿವಾರ ಸಂಸತ್ ನಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ನಿರ್ಮಲಾ ಸೀತಾರಾಮನ್ ಅವರು, 'ಓಲಾ ಮತ್ತು ಸ್ವಿಗ್ಗಿ ಕಾರ್ಮಿಕರ ಆರ್ಥಿಕ ಪರಿಸ್ಥಿತಿ ಬಲ ತುಂಬುವ ಕೆಲಸ ಮಾಡಲಾಗಿದೆ. ಓಲಾ ಮತ್ತು ಸ್ವಿಗ್ಗಿಯಲ್ಲಿ ಕಾರ್ಯ ನಿರ್ವಹಿಸುವ ಯುವಕರಿಗೆ I-Card ಮಾಡಲಾಗುವುದು ಮತ್ತು e-shram ಪೋರ್ಟಲ್‌ನಲ್ಲಿ ಇವರ ಹೆಸರುಗಳನ್ನು ನೋಂದಾಯಿಸಲಾಗುವುದು.
ಈ ಯೋಜನೆಯಲ್ಲಿ 1 ಕೋಟಿ ಗಿಗ್ ವರ್ಕರ್ಸ್ (Gig Worker) ಲಾಭ ಸಿಗಲಿದೆ . ನಗರ ಪ್ರದೇಶದ ಬಡ ಮತ್ತು ವಂಚಿತ ಗುಂಪುಗಳ ಆದಾಯ, ಸುಸ್ಥಿರ ಜೀವನೋಪಾಯ ಮತ್ತು ಉತ್ತಮ ಜೀವನವನ್ನು ಹೆಚ್ಚಿಸಲು ನಗರ ಕಾರ್ಮಿಕರ ಉನ್ನತಿಗಾಗಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಅಂತೆಯೇ ನಗರ ಕಾರ್ಮಿಕರ ಸಾಮಾಜಿಕ-ಆರ್ಥಿಕ ಉನ್ನತಿಗಾಗಿ ಒಂದು ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. "ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಗಿಗ್ ಕಾರ್ಮಿಕರು 'ನವಯುಗ' ಸೇವಾ ಆರ್ಥಿಕತೆಗೆ ಉತ್ತಮ ಚೈತನ್ಯವನ್ನು ಒದಗಿಸುತ್ತಾರೆ. ಅವರ ಕೊಡುಗೆಯನ್ನು ಗುರುತಿಸಿ, ನಮ್ಮ ಸರ್ಕಾರವು ಅವರ ಗುರುತಿನ ಚೀಟಿಗಳು ಮತ್ತು ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿಗೆ ವ್ಯವಸ್ಥೆ ಮಾಡುತ್ತದೆ" ಎಂದು ಅವರು ಹೇಳಿದರು.
ಅಂತಹ ಕಾರ್ಮಿಕರಿಗೆ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PM-JAY) ಅಡಿಯಲ್ಲಿ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಮತ್ತು ಈ ಕ್ರಮವು ಸುಮಾರು ಒಂದು ಕೋಟಿ ಕಾರ್ಮಿಕರಿಗೆ ಸಹಾಯ ಮಾಡುವ ಸಾಧ್ಯತೆಯಿದೆ ಎಂದು ಸೀತಾರಾಮನ್ ಹೇಳಿದರು.
Advertisement