
ನವದೆಹಲಿ: ದೇಶದಲ್ಲಿ ಇಂಧನ ಪರಿವರ್ತನೆಗಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಪರಮಾಣು ಇಂಧನ ಮಿಷನ್ ಘೋಷಣೆ ಮಾಡಿದ್ದು, 2047ರ ವೇಳೆಗೆ ಕನಿಷ್ಠ 100 ಗಿಗಾವ್ಯಾಟ್ ಇಂಧನ ಉತ್ಪಾದನೆ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ 2025-2026ನೇ ಸಾಲಿನ ಬಜೆಟ್ ಮಂಡಿಸಿದ ಸೀತಾರಾಮನ್ ಅವರು, ಖಾಸಗಿ ಸಹಭಾಗಿತ್ವದಲ್ಲಿ ಈ ಪರಮಾಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
“2047 ರ ವೇಳೆಗೆ ಕನಿಷ್ಠ 100 ಗಿಗಾವ್ಯಾಟ್ ಪರಮಾಣು ಇಂಧನ ಉತ್ಪಾದನೆ ಮಾಡುವುದು ನಮ್ಮ ಗುರಿಯಾಗಿದೆ. ಈ ಗುರಿಯತ್ತ ಖಾಸಗಿ ವಲಯದೊಂದಿಗೆ ಸಕ್ರಿಯ ಪಾಲುದಾರಿಕೆಗಾಗಿ, ಪರಮಾಣು ಶಕ್ತಿ ಕಾಯ್ದೆ ಮತ್ತು ಪರಮಾಣು ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆಗೆ ತಿದ್ದುಪಡಿಗಳನ್ನು ತರಲಾಗುವುದು” ಎಂದು ಹಣಕಾಸು ಸಚಿವರು ಹೇಳಿದರು.
ಇದರ ಜೊತೆಗೆ, ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ(SMRs) ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುವ ಪರಮಾಣು ಶಕ್ತಿ ಮಿಷನ್‌ನ ಯೋಜನೆಗಳನ್ನು ಹಣಕಾಸು ಸಚಿವರು ಬಹಿರಂಗಪಡಿಸಿದರು.
2033ರ ವೇಳೆಗೆ ಕನಿಷ್ಠ ಐದು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳು ಕಾರ್ಯರೂಪಕ್ಕೆ ಬರಲಿವೆ. ಈ ಮಿಷನ್‌ಗೆ 20,000 ಕೋಟಿ ರೂ. ಬಜೆಟ್ ನಲ್ಲಿ ಮೀಸಲಿಡಲಾಗುವುದು ಎಂದು ತಿಳಿಸಿದರು.
ಕಳೆದ ವರ್ಷ ಫೆಬ್ರವರಿಯಲ್ಲಿ, ಕೇಂದ್ರ ಸರ್ಕಾರ 18 ಪರಮಾಣು ವಿದ್ಯುತ್ ರಿಯಾಕ್ಟರ್‌ಗಳ ಆರಂಭದ ಬಗ್ಗೆ ಘೋಷಿಸಿತ್ತು. ಈ ರಿಯಾಕ್ಟರ್‌ಗಳು ಒಟ್ಟಾರೆಯಾಗಿ 13,800 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತವೆ. ಇದರೊಂದಿಗೆ 2031-32 ರ ವೇಳೆಗೆ ಇಂಧನ ವಲಯದ ಒಟ್ಟು ಪರಮಾಣು ವಿದ್ಯುತ್ ಸಾಮರ್ಥ್ಯವು 22,480 ಮೆಗಾವ್ಯಾಟ್ ತಲುಪುವ ನಿರೀಕ್ಷೆಯಿದೆ.
Advertisement