ISRO ಹಾರಿಸಿದ್ದ ಉಪಗ್ರಹದಲ್ಲಿ ತಾಂತ್ರಿಕ ದೋಷ; ಕಕ್ಷೆಗೆ ಸೇರಿಸುವ ಕಾರ್ಯ ವಿಳಂಬ ಸಾಧ್ಯತೆ!

ಬುಧವಾರ ಉಡಾವಣೆಯಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) 100ನೇ ರಾಕೆಟ್ NVS-02 ನ್ಯಾವಿಗೇಷನ್‌ ಉಪಗ್ರಹವನ್ನು ಹೊತ್ತು ಸಾಗಿತ್ತು.
ISROs Latest Mission Hits A Hurdle
ಇಸ್ರೋದ ಉಡಾವಣೆ (ಸಂಗ್ರಹ ಚಿತ್ರ)
Updated on

ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇತ್ತೀಚೆಗೆ ಹಾರಿಸಿದ್ದ ತನ್ನ 100ನೇ ರಾಕೆಟ್ ಉಡಾವಣೆಯ ಕಾರ್ಯಾಚರಣೆಗೆ ತಾಂತ್ರಿಕ ದೋಷ ಎದುರಾಗಿದ್ದು, ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಕಾರ್ಯ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬುಧವಾರ ಉಡಾವಣೆಯಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) 100ನೇ ರಾಕೆಟ್ NVS-02 ನ್ಯಾವಿಗೇಷನ್‌ ಉಪಗ್ರಹವನ್ನು ಹೊತ್ತು ಸಾಗಿತ್ತು. ಇದೀಗ ಇದೇ ಉಪಗ್ರಹ ಕಾರ್ಯಾಚರಣೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಜನವರಿ 29ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ NVS-02 ನ್ಯಾವಿಗೇಷನ್‌ ಉಪಗ್ರಹ ಹೊತ್ತ GSLV-F15 ರಾಕೆಟ್‌ ನಭಕ್ಕೆ ಚಿಮ್ಮಿತ್ತು. ಇಂದು ರಾಕೆಟ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

ಉಪ್ರಗ್ರಹ ಉಡಾವಣೆಯ ಬಳಿಕ ಸೌರಫಲಕಗಳನ್ನು ಯಶಸ್ವಿಯಾಗಿ ನಿಯೋಜಿಸಲಾಗಿತ್ತು. ಅದರೆ ಕಕ್ಷೆಗೆ ಏರಿಸಲು ಥ್ರಸ್ಟರ್‌ಗಳನ್ನು ಹಾರಿಸಲು ಆಕ್ಸಿಡೈಸರ್‌ ಅನುಮತಿಸುವ ಕವಾಟಗಳು ತೆರಯದ ಕಾರಣ ಕಕ್ಷೆಯ ಸುತ್ತುಗಳನ್ನು ಹೆಚ್ಚಿಸುವ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಇದು ಮುಂದೆ ಗೊತ್ತುಪಡಿಸಿದ ನಿರ್ದಿಷ್ಟ ಕಕ್ಷೆಗೆ ಸೇರಿಸಬಹುದು ಅಥವಾ ತಾಂತ್ರಿಕ ಅಡಚಣೆ ಹೀಗೆ ಮುಂದುವರಿದರೆ ಕಾರ್ಯಾಚರಣೆ ಕೈಬಿಡಲೂಬಹುದು ಎಂದು ಇಸ್ರೋ ಮೂಲಗಳು ತಿಳಿಸಿವೆ.

ISROs Latest Mission Hits A Hurdle
Watch | ಇಸ್ರೋ 100ನೇ ರಾಕೆಟ್‌ ಉಡಾವಣೆ ಯಶಸ್ವಿ; ನಾವಿಕ್-02 ಉಡ್ಡಯನ, ಇತಿಹಾಸ ಸೃಷ್ಟಿ

ಇಸ್ರೋ ಮಾಹಿತಿ

ಕಾರ್ಯಾಚರಣೆಯು ತಾಂತ್ರಿಕ ದೋಷ ಎದುರಿಸಿದೆ ಎಂದು ಹೇಳಿದ ಇಸ್ರೋ ಈ ಬಗ್ಗೆ ತನ್ನ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದೆ. "ಕಕ್ಷೆಯನ್ನು ಹೆಚ್ಚಿಸಲು ಥ್ರಸ್ಟರ್‌ಗಳನ್ನು ಹಾರಿಸಲು ಆಕ್ಸಿಡೈಸರ್ ಅನ್ನು ಪ್ರವೇಶಿಸುವ ಕವಾಟಗಳು ತೆರೆಯದ ಕಾರಣ ಉಪಗ್ರಹವನ್ನು ಗೊತ್ತುಪಡಿಸಿದ ಕಕ್ಷೆಯ ಸ್ಲಾಟ್‌ಗೆ ಇರಿಸುವ ಕಡೆಗೆ ಕಕ್ಷೆಯನ್ನು ಹೆಚ್ಚಿಸುವ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ" ಎಂದು ಹೇಳಿದೆ.

ಯು ಆರ್ ರಾವ್ ಉಪಗ್ರಹ ಕೇಂದ್ರದಿಂದ ನಿರ್ಮಿಸಲಾದ NVS-02 ಉಪಗ್ರಹವನ್ನು ಭಾರತದ ಮೇಲೆ ಗೊತ್ತುಪಡಿಸಿದ ಸ್ಥಳದಲ್ಲಿ ಭೂಸ್ಥಿರ ವೃತ್ತಾಕಾರದ ಕಕ್ಷೆಯಲ್ಲಿ ಇರಿಸಬೇಕಾಗಿತ್ತು. ಉಪಗ್ರಹದಲ್ಲಿರುವ ದ್ರವ ಎಂಜಿನ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸದ ಕಾರಣ, ಅದನ್ನು ಅದರ ಗೊತ್ತುಪಡಿಸಿದ ಕಕ್ಷೆಗೆ ಕಳುಹಿಸುವ ಪ್ರಯತ್ನ ವಿಳಂಬವಾಗಬಹುದು ಅಥವಾ ಸಂಪೂರ್ಣವಾಗಿ ಕೈಬಿಡಲೂಬಹುದು. ಪ್ರಸ್ತುತ ಉಪಗ್ರಹ ವ್ಯವಸ್ಥೆಗಳು ಆರೋಗ್ಯಕರವಾಗಿವೆ ಮತ್ತು ಉಪಗ್ರಹವು ಪ್ರಸ್ತುತ ಅಂಡಾಕಾರದ ಕಕ್ಷೆಯಲ್ಲಿದೆ. ಅಂಡಾಕಾರದ ಕಕ್ಷೆಯಲ್ಲಿ ಸಂಚರಣೆಗಾಗಿ ಉಪಗ್ರಹವನ್ನು ಬಳಸಿಕೊಳ್ಳಲು ಪರ್ಯಾಯ ಮಿಷನ್ ತಂತ್ರಗಳನ್ನು ರೂಪಿಸಲಾಗುತ್ತಿದೆ" ಎಂದು ಇಸ್ರೋ ಹೇಳಿದೆ.

ಭೂಮಿಯ ಸುತ್ತಲಿನ ಹತ್ತಿರದ ಬಿಂದುವಿಗೆ ಸುಮಾರು 170 ಕಿಲೋಮೀಟರ್‌ಗಳ ದೀರ್ಘವೃತ್ತದ ಕಕ್ಷೆಯಿಂದ ಮತ್ತು ಭೂಮಿಯಿಂದ ಅತ್ಯಂತ ದೂರದ ಬಿಂದುವಿನಲ್ಲಿ ಸುಮಾರು 36,577 ಕಿಲೋಮೀಟರ್‌ಗಳವರೆಗೆ ಉಪಗ್ರಹವು ತನ್ನ ಗೊತ್ತುಪಡಿಸಿದ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಬಾಹ್ಯಾಕಾಶ ತಜ್ಞರು ಹೇಳಿದ್ದಾರೆ.

ವರ್ಷದ ಮೊದಲ ಉಡಾವಣೆ

ಇನ್ನು 2025ರ ಹೊಸ ವರ್ಷದಲ್ಲಿ ಇಸ್ರೋ ನಡೆಸಿದ ಯಶಸ್ವಿ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಇದಾಗಿದ್ದು, ಮೊದಲ ಹಾಗೂ ಇಸ್ರೋದ 100ನೇ ಯಶಸ್ವಿ ಉಡಾವಣೆಯಾಗಿತ್ತು. ಕಳೆದ ಬುಧವಾರ ಬೆಳಿಗ್ಗೆ 6:23 ಕ್ಕೆ, ಇಸ್ರೋ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ NVS-02 ಅನ್ನು ಹೊತ್ತ GSLV-F15 ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿತ್ತು. ಅಂತೆಯೇ ಇದು ಅದರ 100ನೇ ಕಾರ್ಯಾಚರಣೆ ಕೂಡ ಆಗಿತ್ತು.

ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ವಿ ನಾರಾಯಣನ್ ಅವರಿಗೂ ಈ ಕಾರ್ಯಾಚರಣೆ ಮೊದಲನೆಯದಾಗಿದ್ದು, ಅಂತೆಯೇ ಇದು ಈ ವರ್ಷದ ಇಸ್ರೋದ ಮೊದಲ ಉಡಾವಣೆ ಕೂಡ ಆಗಿತ್ತು.

NVS-02 ನ್ಯಾವಿಗೇಷನ್ ಉಪಗ್ರಹ ವಿಶೇಷತೆ

ಇಸ್ರೋ ಈ ಹಿಂದೆ ಅಂದರೆ ಮೇ 29, 2023ರಲ್ಲಿ ಎರಡನೇ ತಲೆಮಾರಿನ NVS-01 ನ್ಯಾವಿಗೇಷನ್‌ ಉಪಗ್ರಹವನ್ನು ಯಶಸ್ವಿಯಾಗಿ ಭೂಕಕ್ಷೆಗೆ ಸೇರಿಸಿತ್ತು. NVS-02 ನ್ಯಾವಿಗೇಷನ್‌ ಉಪಗ್ರಹವು ಇದರ ಮುಂದುವರೆದ ಭಾಗವಾಗಿದೆ. ಭೂಕಕ್ಷೆಯ ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ನಲ್ಲಿ ಕಾರ್ಯಾಚರಣೆ ನಡೆಸಲು ಕಕ್ಷೆಗೆ ಕಳುಹಿಸಲಾಗಿದೆ. ಎರಡನೇ ತಲೆಮಾರಿನ ಎರಡನೇ ಉಪಗ್ರಹವಾದ 2,250 ಕೆಜಿ ತೂಕದ NVS-02 ನ್ಯಾವಿಗೇಷನ್ ಉಪಗ್ರಹವು ಜಾಗತಿಕ ಸ್ಥಾನೀಕರಣ ವ್ಯವಸ್ಥೆ ಅಥವಾ GPS ಗೆ ಸಮಾನವಾದ ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟೆಲ್ಲೇಷನ್ (NavIC) ನ ಭಾಗವಾಗಿತ್ತು.

ನ್ಯಾವಿಗೇಷನ್ ವಿಥ್ ಇಂಡಿಯನ್ ಕಾನ್ಸ್ಟೆಲೇಷನ್ (NavIC) ಭಾರತದ ಸ್ವತಂತ್ರ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯಾಗಿದ್ದು, ಭಾರತದ ಬಳಕೆದಾರರಿಗೆ ನಿಖರವಾದ ಸ್ಥಾನ, ವೇಗ ಮತ್ತು ಸಮಯ (PVT)ದ ಸೇವೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಭಾರತದ ಭೂಪ್ರದೇಶವನ್ನು ಮೀರಿ ಸುಮಾರು 1,500 ಕಿ.ಮೀ. ವ್ಯಾಪ್ತಿಯಲ್ಲಿ ಉಪಗ್ರಹವು ತನ್ನ ಸೇವೆಯನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ ಎಂಬುದು ವಿಶೇಷ.

ISROs Latest Mission Hits A Hurdle
ISRO ಮೊದಲ ಸ್ಪೇಸ್ ಡಾಕಿಂಗ್ ಯಶಸ್ವಿ: ಮೈಲಿಗಲ್ಲು ಸಾಧಿಸಿದ 4ನೇ ದೇಶ ಭಾರತ; ಪ್ರಧಾನಿ ಸೇರಿ ಗಣ್ಯರ ಅಭಿನಂದನೆ

ಹಿನ್ನಲೆ

ಪಾಕಿಸ್ತಾನದೊಂದಿಗಿನ 1999 ರ ಕಾರ್ಗಿಲ್ ಯುದ್ಧ ಭಾರತಕ್ಕೆ ತನ್ನದೇ ಆದ ಸವಾಲುಗಳನ್ನು ನೀಡಿತ್ತು. ಆ ಯುದ್ಧದ ಸಂದರ್ಭದಲ್ಲಿ ಭಾರತಕ್ಕೆ ಉತ್ತಮ ಗುಣಮಟ್ಟದ ಜಿಪಿಎಸ್ ಡೇಟಾಗೆ ಪ್ರವೇಶವನ್ನು ಇತರೆ ದೇಶಗಳು ನಿರಾಕರಿಸಿದ್ದವು. ಆಗ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಂತರ ದೇಶದ ಕಾರ್ಯತಂತ್ರದ ಸಮುದಾಯಕ್ಕಾಗಿ ಜಿಪಿಎಸ್‌ನ ಪ್ರಾದೇಶಿಕ ಆವೃತ್ತಿಯನ್ನು ತಯಾರಿಸುವುದಾಗಿ ಭರವಸೆ ನೀಡಿದ್ದರು.

ಅದರಂತೆ ಭಾರತ ತನ್ನದೇ ಆದ NavIC ಉಪಗ್ರಹವನ್ನು ಅಭಿವೃದ್ಧಿಪಡಿಸಿತ್ತು. ಆದಾಗ್ಯೂ, ನಾವಿಕ್ ಸರಣಿಯ ಅನೇಕ ಉಪಗ್ರಹಗಳು ನಿರೀಕ್ಷೆಗಳನ್ನು ತಲುಪಲಿಲ್ಲ. 2013 ರಿಂದ, ನಾವಿಕ್‌ನ ಭಾಗವಾಗಿ ಒಟ್ಟು 11 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ ಮತ್ತು ಇವುಗಳಲ್ಲಿ, ಆರು ಉಪಗ್ರಹಗಳು ವಿವಿಧ ಕಾರಣಗಳಿಗಾಗಿ ಸಂಪೂರ್ಣವಾಗಿ ಅಥವಾ ಭಾಗಶಃ ವಿಫಲವಾಗಿವೆ ಮತ್ತು ಈಗ ಇತ್ತೀಚಿನದು ಸಹ ಪ್ರಮುಖ ತಾಂತ್ರಿಕ ದೋಷಗಳನ್ನು ಎದುರಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com