
ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ನಡುವೆ ಮಹಾರಾಷ್ಟ್ರದಲ್ಲಿ, ಹಿಮಾಚಲ ಪ್ರದೇಶದ ಜನಸಂಖ್ಯೆಗೆ ಸಮಾನವಾದ ಸುಮಾರು 70 ಲಕ್ಷ ಮತದಾರರನ್ನು ದಿಢೀರ್ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ಚುನಾವಣಾ ಆಯೋಗವು ರಾಜ್ಯದ ವಿರೋಧ ಪಕ್ಷಗಳಿಗೆ ಅಂಕಿಅಂಶಗಳನ್ನು ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಸಮಗ್ರತೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎತ್ತಿದರು.
ವಿರೋಧ ಪಕ್ಷಗಳು ಕೇಳಿದ ವಿವರಗಳನ್ನು ಚುನಾವಣಾ ಆಯೋಗ ಒದಗಿಸುವುದಿಲ್ಲ ಎಂಬುದು ನಮಗೆ ಗೊತ್ತು. ನಮ್ಮ ಜನರ ಮತ ಮತ್ತು ಮತದಾನಕ್ಕೆ ಸುರಕ್ಷತೆ ಇಲ್ಲದಿದ್ದರೆ ಸಂವಿಧಾನ ಬೆಲೆ ಇರುವುದಿಲ್ಲ" ಎಂದು ಕೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದು ಹೇಳಿದರು.
"ಈಗ, ಮಹಾರಾಷ್ಟ್ರ ಚುನಾವಣೆಯ ಬಗ್ಗೆ ಕೆಲವು ಡೇಟಾವನ್ನು ನಾನು ಈ ಸದನದ ಗಮನಕ್ಕೆ ತರಲು ಬಯಸುತ್ತೇನೆ. ಇಂಡಿಯಾ ಬಣ ಗೆದ್ದ ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗಳ ನಡುವೆ, ಹಿಮಾಚಲದ ಜನಸಂಖ್ಯೆಗೆ ಸಮಾನವಾದ ಸಂಖ್ಯೆಯನ್ನು ಮಹಾರಾಷ್ಟ್ರದ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ" ಎಂದು ಸದನಕ್ಕೆ ತಿಳಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಹಾಜರಿದ್ದರು.
ಜೂನ್‌ನಲ್ಲಿ ನಡೆದ ಲೋಕಸಭಾ ಚುನಾವಣೆ ಮತ್ತು ನವೆಂಬರ್‌ನಲ್ಲಿ ನಡೆದ ರಾಜ್ಯ ಚುನಾವಣೆಗಳ ನಡುವಿನ ವ್ಯತ್ಯಾಸವೆಂದರೆ ಸುಮಾರು 70 ಲಕ್ಷ ಮತದಾರರು ಇದ್ದಕ್ಕಿದ್ದಂತೆ ಆಗಮಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಮಹಾರಾಷ್ಟ್ರದಲ್ಲಿ ಕಳೆದ 5 ವರ್ಷಗಳಲ್ಲಿ ಸೇರ್ಪಡೆಯಾದ ಮತದಾರರಿಗಿಂತ ಹೆಚ್ಚು ಮತದಾರರನ್ನು ವಿಧಾನಸಭೆ ಚುನಾವಣೆಗೆ ಹಿಂದಿನ 5 ತಿಂಗಳಲ್ಲಿ ಸೇರಿಸಲಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಹೊಸ ಮತದಾರರ ನೋಂದಣಿಗಳಲ್ಲಿ ಹೆಚ್ಚಿನವು ಬಿಜೆಪಿ ಗೆದ್ದ ಕ್ಷೇತ್ರಗಳಲ್ಲಿ ಕೇಂದ್ರೀಕೃತವಾಗಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಿ ಹೇಳಿದರು.
ಒಂದು ಉದಾಹರಣೆಯನ್ನು ಉಲ್ಲೇಖಿಸಿ, ಶಿರಡಿಯ ಕಟ್ಟಡವೊಂದರಲ್ಲಿ, ಲೋಕಸಭಾ ಚುನಾವಣೆಯ ನಂತರ ಸುಮಾರು 7,000 ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದು ಅವರು ತಿಳಿಸಿದರು.
"ನಾನು ಆರೋಪ ಮಾಡುತ್ತಿಲ್ಲ, ಹಿಮಾಚಲ ಪ್ರದೇಶದ ಜನಸಂಖ್ಯೆಗೆ ಸಮಾನವಾದ ಜನಸಂಖ್ಯೆಯನ್ನು ಲೋಕಸಭಾ ಚುನಾವಣೆಯ ನಂತರ ಮ್ಯಾಜಿಕ್ ಮೂಲಕ ಮಹಾರಾಷ್ಟ್ರದಲ್ಲಿ ಸೇರಿಸಲಾಗಿದೆ ಎಂಬ ಸಮಸ್ಯೆ ಇದೆ ಎಂದು ಹೇಳುತ್ತಿದ್ದೇನೆ" ಎಂದರು.
“ಚುನಾವಣಾ ಆಯೋಗ ದಯವಿಟ್ಟು ಲೋಕಸಭೆಯಲ್ಲಿರುವ ಎಲ್ಲಾ ಮತದಾರರ ಮತ್ತು ವಿಧಾನಸಭಾ ಸಭೆಯಲ್ಲಿರುವ ಎಲ್ಲಾ ಮತದಾರರ ಹೆಸರುಗಳು ಮತ್ತು ವಿಳಾಸಗಳು ಮತ್ತು ಮತಗಟ್ಟೆಗಳನ್ನು ನಮಗೆ ನೀಡಬೇಕು. ಇದರಿಂದ ಈ ಹೊಸ ಮತದಾರರು ಯಾರು ಎಂದು ನಾವು ಲೆಕ್ಕ ಹಾಕಬಹುದು. ಕುತೂಹಲಕಾರಿಯಾಗಿ ಹೊಸ ಮತದಾರರು ಹೆಚ್ಚಾಗಿ ಬಿಜೆಪಿ ಗೆದ್ದ ಕ್ಷೇತ್ರಗಳಲ್ಲಿದ್ದಾರೆ. ನಾನು ಇನ್ನೂ ಯಾವುದೇ ಆರೋಪ ಮಾಡುತ್ತಿಲ್ಲ. ಚುನಾವಣಾ ಆಯೋಗವು ಡೇಟಾವನ್ನು ನೀಡಬೇಕು ಎಂದು ನಾನು ಸದನದಲ್ಲಿ ಹೇಳುತ್ತಿದ್ದೇನೆ” ಎಂದು ರಾಹುಲ್ ಹೇಳಿದರು.
Advertisement