
ನವದೆಹಲಿ: ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ವೇಳೆಯಲ್ಲಿ ಸಂಭವಿಸಿದ ಕಾಲ್ತುಳಿತದ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆಗೆ ಸೂಕ್ತ ಮಾರ್ಗಸೂಚಿಗಳನ್ನು ಖಾತ್ರಿಗಾಗಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಮೌನಿ ಅಮವ್ಯಾಸೆಯಿಂದ ಸಂಭವಿಸಿದ ಕಾಲ್ತುಳಿತದಲ್ಲಿ ಸುಮಾರು 30 ಜನರು ಸಾವನ್ನಪ್ಪಿದ್ದರು. 60 ಜನರು ಗಾಯಗೊಂಡಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಲಹಾಬಾದ್ ಹೈಕೋರ್ಟ್ ನಲ್ಲಿ ಅರ್ಜಿಯೊಂದರ ವಿಚಾರಣೆ ನಡೆಯುತ್ತಿದೆ ಎಂಬ ಉತ್ತರ ಪ್ರದೇಶ ಸರ್ಕಾರದ ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ, ಅಫೆಕ್ಸ್ ಕೋರ್ಟ್ ನಲ್ಲಿ ಈ ಅರ್ಜಿಯನ್ನು ಪರಿಶೀಲಿಸಬಾರದು ಎಂದು ಹೇಳಿತು.
ಇದೊಂದು ದುರಾದೃಷ್ಟಕರ ಘಟನೆ ಎಂದು ಬಣ್ಣಿಸಿದ ಸರ್ವೋಚ್ಚ ನ್ಯಾಯಾಲಯ, ಅರ್ಜಿದಾರ ವಕೀಲ ವಿಶಾಲ್ ತಿವಾರಿ ಅವರಿಗೆ ಅಲಹಾಬಾದ್ ಹೈಕೋರ್ಟ್‌ಗೆ ಮೊರೆ ಹೋಗುವಂತೆ ತಿಳಿಸಿತು.
ಘಟನೆ ಸಂಬಂಧ ನ್ಯಾಯಾಂಗ ತನಿಖೆ ಆರಂಭಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ಸಲ್ಲಿಸಿದ ಮನವಿಯನ್ನು ಸುಪ್ರೀಂಕೋರ್ಟ್ ಆಲಿಸಿತು. ಪ್ರಯಾಗ್‌ರಾಜ್‌ನಲ್ಲಿ ಕಾಲ್ತುಳಿತದ ಘಟನೆ ಸಂಭವಿಸಿದ ಒಂದು ದಿನದ ನಂತರ ಜನವರಿ 30 ರಂದು ಸುಪ್ರೀಂ ಕೋರ್ಟ್‌ನಲ್ಲಿ PIL ಸಲ್ಲಿಸಲಾಗಿತ್ತು.
ಹಿಂದೂ ಕ್ಯಾಲೆಂಡರ್ ನಲ್ಲಿ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾದ ಮೌನಿ ಅಮವಾಸ್ಯೆಯ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಬಳಿಕ ಸಂವಿಧಾನದ 32ನೇ ವಿಧಿಯಡಿ ತಿವಾರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಕಾಲ್ತುಳಿತದಂತಹ ಘಟನೆ ತಡೆಯಲು ಹಾಗೂ ಸಂವಿಧಾನದ 21ನೇ ವಿಧಿಯಡಿ ಸಮಾನತೆ ಮತ್ತು ಬದುಕಿನ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಮಾರ್ಗಸೂಚಿ ಹೊರಡಿಸುವಂತೆ ಕೋರಿದ್ದರು.
Advertisement