
ಮುಂಬೈ: ಸರ್ಕಾರಿ ಕಚೇರಿಗಳಲ್ಲಿ 'ಮರಾಠಿ ಭಾಷೆ' ಕಡ್ಡಾಯಗೊಳಿಸಿ ಮಹಾರಾಷ್ಟ್ರ ಸರ್ಕಾರ ಭಾನುವಾರ ಆದೇಶ ಹೊರಡಿಸಿದೆ.
ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು, ನಿಗಮಗಳು ಮತ್ತಿತರ ಸರ್ಕಾರಿ-ಸಂಬಂಧಿತ ಕಚೇರಿಗಳಲ್ಲಿನ ಎಲ್ಲಾ ನೌಕರರು ತಮ್ಮ ಕಚೇರಿಗಳಲ್ಲಿ ಹೊರದೇಶ, ಮರಾಠಿ ಮಾತನಾಡದ ಅನ್ಯ ರಾಜ್ಯಗಳಿಂದ ಬರುವ ಜನರನ್ನು ಹೊರತುಪಡಿಸಿ ಎಲ್ಲಾ ಸಂದರ್ಶಕರೊಂದಿಗೆ ಮರಾಠಿ ಭಾಷೆಯಲ್ಲಿಯೇ ಮಾತನಾಡಲು ಸೂಚಿಸಲಾಗಿದೆ.
ಈ ನಿಯಮ ಉಲ್ಲಂಘಿಸಿದ ಯಾವುದೇ ಅಧಿಕಾರಿ ವಿರುದ್ಧ ಅಗತ್ಯ ಕ್ರಮಕ್ಕಾಗಿ ಕಚೇರಿ ಅಥವಾ ಇಲಾಖೆಯ ಪ್ರಭಾರಿಗಳಿಗೆ ದೂರು ಸಲ್ಲಿಸಬಹುದು. ಅದನ್ನು ಅಧಿಕೃತ ಅಶಿಸ್ತಿನ ಕ್ರಮವೆಂದು ಪರಿಗಣಿಸಲಾಗುತ್ತದೆ.
ನಿಯಮ ಉಲ್ಲಂಘಿಸಿದವರ ವಿರುದ್ಧ ತೆಗೆದುಕೊಂಡ ಕ್ರಮದಿಂದ ದೂರುದಾರರು ತೃಪ್ತರಾಗದಿದ್ದರೆ ಮಹಾರಾಷ್ಟ್ರ ಶಾಸಕಾಂಗದ ಮರಾಠಿ ಭಾಷಾ ಸಮಿತಿಯ ಮುಂದೆ ಮೇಲ್ಮನವಿ ಸಲ್ಲಿಸಬಹುದು" ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸರ್ಕಾರದ ಅನುದಾನದ ಮೂಲಕ ಖರೀದಿಸಿದ ಕಂಪ್ಯೂಟರ್ ಕೀಬೋರ್ಡ್‌ಗಳಲ್ಲಿ ಮರಾಠಿ ದೇವನಾಗರಿ ಲಿಪಿಯೊಂದಿಗೆ ರೋಮನ್ ವರ್ಣಮಾಲೆ" ಇರುವುದು ಕಡ್ಡಾಯವಾಗಿದೆ.
ಸರ್ಕಾರ ಅನುಮೋದಿಸಿದ ಚಟುವಟಿಕೆಗಳಡಿ ಉದ್ಯಮಗಳು ಮಾಧ್ಯಮಗಳಿಗೆ ನೀಡುವ ಜಾಹೀರಾತುಗಳಲ್ಲಿ ಮರಾಠಿ ಭಾಷೆಯ ಬಳಕೆಯನ್ನು ಕಡ್ಡಾಯಗೊಳಿಸಬೇಕು. ಮುಂದಿನ 25 ವರ್ಷಗಳಲ್ಲಿ ಮರಾಠಿಯನ್ನು ಜ್ಞಾನ ಮತ್ತು ಉದ್ಯೋಗದ ಭಾಷೆಯಾಗಿ ಸ್ಥಾಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.
Advertisement