
ಸಿಯೋನಿ: ಕಾಡುಹಂದಿಯನ್ನು ಅಟ್ಟಿಸಿಕೊಂಡು ಬಂದ ಹುಲಿಯೊಂದು ಹಂದಿ ಜೊತೆಗೇ ಬಾವಿಗೆ ಬಿದ್ದಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕಾಡು ಹಂದಿಯನ್ನು ಬೇಟೆಯಾಡುವ ರಭಸದಲ್ಲಿ ಹುಲಿಯೊಂದು ಹಂದಿ ಜೊತೆಗೇ ಬಾವಿಗೆ ಬಿದ್ದಿರುವ ಅಪರೂಪದ ಘಟನೆ ನಡೆದಿದೆ.
ಬಾವಿಯಿಂದ ಹುಲಿ ಮತ್ತು ಕಾಡುಹಂದಿಯ ಚೀರಾಟ ಕೇಳಿದ ಗ್ರಾಮಸ್ಥರು ಬಂದು ನೋಡಿದಾಗ ಹುಲಿ ಮತ್ತು ಕಾಡುಹಂದಿ ಬಿದ್ದಿರುವ ವಿಚಾರ ತಿಳಿದಿದೆ. ನೋಡ ನೋಡುತ್ತಲೇ ನೂರಾರು ಗ್ರಾಮಸ್ಥರು ಆಘಾತ ಮತ್ತು ವಿಸ್ಮಯದಿಂದ ಬಾವಿಯ ಸುತ್ತಲೂ ಜಮಾಯಿಸಿ ಹುಲಿ ಮತ್ತು ಹಂದಿಯ ಜುಗಲ್ ಬಂದಿ ನೋಡುತ್ತಿದ್ದರು.
ಬಾವಿಯಲ್ಲಿ ಕಾಡು ಹಂದಿ ಪಕ್ಕದಲ್ಲೇ ಈಜುತ್ತಿದ್ದರೂ ಹುಲಿರಾಯ ಮಾತ್ರ ಅದನ್ನೂ ಏನೂ ಮಾಡದೇ ಬಾವಿಯಿಂದ ಮೇಲೇರುವ ಪ್ರಯತ್ನ ಮಾಡುತ್ತಿತ್ತು. ಅಂತೆಯೇ ಮೊದಲ ಬಾರಿಗೆ ಎನ್ನುವಂತೆ ಹಂದಿ ಕೂಡ ಹುಲಿಗೆ ಹೆದರದೆ ತನ್ನ ಜೀವ ಉಳಿಸಿಕೊಳ್ಳಲು ತಾನೂ ಕೂಡ ಮೇಲೇರಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಇನ್ನು ವಿಚಾರ ತಿಳಿದ ಕೂಡಲೇ ಅರಣ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಬಳಿಕ ವನ್ಯಜೀವಿ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕರೆಸಿದ್ದಾರೆ. ಗ್ರಾಮಸ್ಥರ ನೆರವಿನೊಂದಿಗೆ ಎರಡೂ ಪ್ರಾಣಿಗಳನ್ನು ಬಾವಿಯಿಂದ ಹೊರತೆಗೆಯುವ ಪ್ರಯತ್ನ ನಡೆಸಿದ್ದಾರೆ.
Advertisement