
ಕೋಲ್ಕತ್ತಾ: ತರಗತಿಯೊಳಗೆ ವಿದ್ಯಾರ್ಥಿಯನ್ನು 'ಮದುವೆಯಾಗುತ್ತಿರುವ' ವೀಡಿಯೊ ವೈರಲ್ ಆದ ಬೆನ್ನಲ್ಲೇ ಪಶ್ಚಿಮ ಬಂಗಾಳದ ವಿಶ್ವವಿದ್ಯಾಲಯವೊಂದರ ಹಿರಿಯ ಮಹಿಳಾ ಪ್ರಾಧ್ಯಾಪಕಿಯೊಬ್ಬರು, ವಿಶ್ವವಿದ್ಯಾಲಯದೊಂದಿಗಿನ ಸಂಬಂಧವನ್ನು ಮುಂದುವರಿಸಲು ನನಗೆ ಸಾಧ್ಯವಾಗುತ್ತಿಲ್ಲ ಎಂಬ ಕಾರಣ ನೀಡಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಮೌಲಾನಾ ಅಬುಲ್ ಕಲಾಂ ಆಜಾದ್ ತಂತ್ರಜ್ಞಾನ ವಿಶ್ವವಿದ್ಯಾಲಯ (MAKAUT) ಆಡಳಿತದಲ್ಲಿರುವ ನಾಡಿಯಾದ ಹರಿಂಗತಾ ತಂತ್ರಜ್ಞಾನ ಕಾಲೇಜಿನ ಮನೋವಿಜ್ಞಾನ ವಿಭಾಗದಲ್ಲಿ ಪಾಯಲ್ ಬ್ಯಾನರ್ಜಿ ಅವರು ಕಾಲೇಜು ವಿದ್ಯಾರ್ಥಿನಿಯೊಂದಿಗೆ ತರಗತಿಯಲ್ಲಿ ಹಿಂದೂ ಬಂಗಾಳಿ ವಿವಾಹ ವಿಧಿವಿಧಾನಗಳನ್ನು ಮಾಡುತ್ತಿರುವ ವಿಡಿಯೋ ಜನವರಿ 28ರಂದು ವೈರಲ್ ಆಗಿತ್ತು. ಜನವರಿ 16ರಂದು ನಡೆದ ಹೊಸಬರ ಸ್ವಾಗತ ಕಾರ್ಯಕ್ರಮದ ಭಾಗವಾಗಿ ತರಗತಿಯಲ್ಲಿ ಪರಿಕಲ್ಪನೆಗಳನ್ನು ವಿವರಿಸಲು ಉದ್ದೇಶಿಸಲಾದ 'ಮಾನಸಿಕ ನಾಟಕ' ಇದಾಗಿತ್ತು. ಆದರೆ ಇದನ್ನು ದುರುದ್ದೇಶಕಪೂರ್ವಕವಾಗಿ ವೈರಲ್ ಮಾಡಲಾಗಿದೆ ಎಂದು ಪ್ರಾಧ್ಯಾಪಕಿ ಹೇಳಿದ್ದಾರೆ.
ಈ ವೈರಲ್ ಆಗುತ್ತಿದ್ದಂತೆ ಪ್ರಾಧ್ಯಾಪಕಿ ಪಾಯಲ್ ಬ್ಯಾನರ್ಜಿಗೆ ರಜೆಯ ಮೇಲೆ ಕಳುಹಿಸಿದ್ದ ಆಡಳಿತ ಮಂಡಳಿ ಇದು ಪ್ರಾಜೆಕ್ಟ್ನ ಭಾಗವಾಗಿತ್ತು ಎಂದು ಹೇಳಿದೆ. ವಿಡಿಯೋದಲ್ಲಿ ಅಪ್ಲೈಡ್ ಸೈಕಾಲಜಿ ವಿಭಾಗದ ಅಧ್ಯಾಪಕರೊಬ್ಬರು ವಧುವಿನಂತೆ ಬಟ್ಟೆ ಧರಿಸಿ , ಹೂಮಾಲೆಯನ್ನು ಪರಸ್ಪರ ಹಾಕಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು. ವಿದ್ಯಾರ್ಥಿ ಆಕೆಯ ಹಣೆಗೆ ಸಿಂಧೂರ ಇಟ್ಟಿದ್ದಾನೆ. ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರ ಜೊತೆಗೆ ಮೂವರು ಸಾಕ್ಷಿಗಳು ಸಹಿ ಮಾಡಿದ ಕೈಬರಹದ ಪ್ರಮಾಣಪತ್ರವೂ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿತ್ತು. ಆದರೆ ಇದು ಕಾಲೇಜಿನ ಪ್ರಾಜೆಕ್ಟ್ನ ಒಂದು ಭಾಗ ಎಂದು ಪ್ರಾಧ್ಯಾಪಕರು ಹೇಳಿದ್ದಾರೆ.
ವೀಡಿಯೊ ಪ್ರಸಾರವಾದ ನಂತರ, ವಿಶ್ವವಿದ್ಯಾಲಯದ ಅಧಿಕಾರಿಗಳು ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ. ನಮ್ಮ ಕಾಲೇಜಿನ ಪ್ರತಿಷ್ಠೆಗೆ ಧಕ್ಕೆ ತರಲು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಅದಕ್ಕೆ ಕಾರಣರಾದವರ ವಿರುದ್ಧ ಪೊಲೀಸ್ ದೂರು ದಾಖಲಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ನಾವು ಫ್ರೆಷರ್ ಪಾರ್ಟಿಗಾಗಿ ಯೋಜಿಸಿದ್ದ ನಾಟಕ. ಇದನ್ನು ನನ್ನ ವಿರುದ್ಧದ ಪಿತೂರಿಯ ಭಾಗವಾಗಿ ಉದ್ದೇಶಪೂರ್ವಕವಾಗಿ ವೈರಲ್ ಮಾಡಲಾಗಿದೆ. ನನ್ನ ಮಾನಹಾನಿ ಮಾಡಲು ಪ್ರಯತ್ನಿಸಿದವರ ವಿರುದ್ಧ ನಾನು ಪೊಲೀಸ್ ದೂರು ನೀಡುತ್ತೇನೆ ಎಂದು ಪ್ರಾಧ್ಯಾಪಕಿ ಕೂಡ ಹೇಳಿದ್ದಾರೆ. ಯಾವುದೇ ಅನುಚಿತತೆ, ಅನೈತಿಕ ನಡವಳಿಕೆ ಇಲ್ಲ ಮತ್ತು ಇದು ಸಂಪೂರ್ಣವಾಗಿ ಕಾಲೇಜಿಗೆ ಸಂಬಂಧ ಪಟ್ಟ ನಾಟಕದ ಭಾಗವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.
Advertisement