
ಪಾಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರು ಮಹಾಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮತ್ತು ಬಿಹಾರ ಸಹ-ಉಸ್ತುವಾರಿ ಶಹನವಾಜ್ ಆಲಂ ಅವರು ಬುಧವಾರ ಘೋಷಿಸುವ ಮೂಲಕ ಕೋಲಾಹಲ ಸೃಷ್ಟಿಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದಲಿತ ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಾಜಿ ಸಚಿವ ಜಗಲಾಲ್ ಚೌಧರಿ ಅವರ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಲು ಇಂದು ಪಾಟ್ನಾಗೆ ಆಗಮಿಸಿದ್ದ ವೇಳೆಯೇ ಆಲಂ ಅವರ ಈ ಹೇಳಿಕೆ ಹೊರಬಿದ್ದಿದೆ.
ನಳಂದದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ತೇಜಸ್ವಿ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಆಲಂ ಅವರು ಈ ಹೇಳಿಕೆ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಆಲಂ, ಬಿಹಾರದಲ್ಲಿ ಮಹಾಮೈತ್ರಿಕೂಟವು ಅಖಂಡವಾಗಿ ಉಳಿದಿದೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯನ್ನು ಪೂರ್ಣ ಹುರುಪಿನಿಂದ ಎದುರಿಸಲಿದೆ ಎಂದರು.
ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಪ್ರತಿಪಾದಿಸಿದ ಕಾಂಗ್ರೆಸ್ ನಾಯಕ, ಆಡಳಿತ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಜನ ಮನಸ್ಸು ಮಾಡಿದ್ದಾರೆ ಎಂದು ಹೇಳಿದರು.
ಇನ್ನು ಕಾಂಗ್ರೆಸ್ ನಾಯಕನ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್‌ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ ಅವರು, ತೇಜಸ್ವಿ ಯಾದವ್ ಅವರು ಮಹಾಮೈತ್ರಿಕೂಟ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ 17 ತಿಂಗಳ ಅವಧಿಯಲ್ಲಿ ಬಿಹಾರದ ಸುಮಾರು 14 ಕೋಟಿ ಜನರ ವಿಶ್ವಾಸ ಗಳಿಸಿದ್ದಾರೆ ಎಂದರು.
ಇದೇ ವೇಳೆ "ಬಿಜೆಪಿ ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರನ್ನು ಘೋಷಿಸುತ್ತದೆಯೇ? ವಿಧಾನಸಭಾ ಚುನಾವಣೆಯ ನಂತರ ಪಕ್ಷವು ಅವರನ್ನು ಮುಖ್ಯಮಂತ್ರಿಯಾಗಿ ಒಪ್ಪಿಕೊಳ್ಳುವುದಿಲ್ಲ" ಎಂದರು. ಅಲ್ಲದೆ ಬಿಜೆಪಿ ನಿತೀಶ್ ಕುಮಾರ್ ಅವರನ್ನು ಮತ್ತು ಅವರ ಪಕ್ಷವನ್ನು ದುರ್ಬಲಗೊಳಿಸಲು ಪಿತೂರಿ ನಡೆಸುತ್ತಿದೆ ಎಂದು ತಿವಾರಿ ಆರೋಪಿಸಿದರು.
Advertisement