
ನವದೆಹಲಿ: ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ವೇತನ ಮತ್ತು ಭತ್ಯೆಗಳನ್ನು ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದೆ.
ಕೊನೆಯ ಬಾರಿಗೆ ಅವರ ವೇತನ, ಭತ್ಯೆ ಮತ್ತು ಪಿಂಚಣಿಯನ್ನು 2017 ರಲ್ಲಿ ಹೆಚ್ಚಿಸಲಾಗಿತ್ತು.
"ಪ್ರಸ್ತುತ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರ ವೇತನ, ಭತ್ಯೆ ಮತ್ತು ಪಿಂಚಣಿ ಇತ್ಯಾದಿಗಳನ್ನು ಹೆಚ್ಚಿಸುವ ಯಾವುದೇ ಪ್ರಸ್ತಾವು ಸರ್ಕಾರದ ಮುಂದೆ ಇಲ್ಲ" ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಲಿಖಿತ ಉತ್ತರ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ಮತ್ತು 25 ಹೈಕೋರ್ಟ್‌ಗಳ ನ್ಯಾಯಾಧೀಶರ ವೇತನ, ಭತ್ಯೆ ಮತ್ತು ಪಿಂಚಣಿಯನ್ನು ಕ್ರಮವಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ(ವೇತನ ಮತ್ತು ಸೇವಾ ಷರತ್ತುಗಳು)ಕಾಯ್ದೆ, 1958 ಮತ್ತು ಹೈಕೋರ್ಟ್ ನ್ಯಾಯಾಧೀಶರ (ವೇತನ ಮತ್ತು ಸೇವಾ ಷರತ್ತುಗಳು) ಕಾಯ್ದೆ, 1954 ನಿಯಂತ್ರಿಸುತ್ತವೆ ಎಂದು ಅವರು ಹೇಳಿದರು.
7ನೇ ವೇತನ ಆಯೋಗದ ಶಿಫಾರಸನ್ನು ಸರ್ಕಾರವು ಎರಡೂ ಕಾನೂನುಗಳಲ್ಲಿ ತಿದ್ದುಪಡಿ ಮಾಡುವ ಮೂಲಕ ಅನುಷ್ಠಾನಗೊಳಿಸಿದ ನಂತರ, ಜನವರಿ 1, 2016 ರಿಂದ ಜಾರಿಗೆ ಬರುವಂತೆ ಉನ್ನತ ಹುದ್ದೆಗಳ ನ್ಯಾಯಾಧೀಶರ ವೇತನ, ಪಿಂಚಣಿ ಮತ್ತು ಭತ್ಯೆಗಳನ್ನು ಕೊನೆಯದಾಗಿ ಪರಿಷ್ಕರಿಸಲಾಯಿತು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ) ತಿಂಗಳಿಗೆ 2.80 ಲಕ್ಷ ರೂ., ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ತಿಂಗಳಿಗೆ 2.50 ಲಕ್ಷ ರೂ., ಹೈಕೋರ್ಟ್‌ಗಳ ನ್ಯಾಯಾಧೀಶರು ತಿಂಗಳಿಗೆ 2.25 ಲಕ್ಷ ರೂ. ವೇತನ ಪಡೆಯುತ್ತಾರೆ.
Advertisement