
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ದೆಹಲಿ ಗದ್ದುಗೆ ಹಿಡಿಯುವ ಕನಸು ಕಾಣುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ.
ಹೌದು.. ಶನಿವಾರ ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಈ ವರೆಗಿನ ಫಲಿತಾಂಶ ವರದಿಯಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆಯಲ್ಲಿದೆ. ಆಡಳಿತಾ ರೂಢ ಎಎಪಿ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆಯಾದರೂ ಈಗಾಗಲೇ ಬಿಜೆಪಿ ಮ್ಯಾಜಿಕ್ ನಂಬರ್ ದಾಟಿದೆ. ಆದರೆ ದೆಹಲಿಯಲ್ಲಿ ಸತತ 15 ವರ್ಷಗಳ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಚುನಾವಣಾ ರೇಸ್ ನಲ್ಲಿ ತೀವ್ರ ಹಿಂದೆ ಬಿದ್ದಿದ್ದು ತಾನು ಸ್ಪರ್ಧಿಸಿದ್ದ ಎಲ್ಲ ಕ್ಷೇತ್ರಗಳಲ್ಲೂ ಹಿನ್ನಡೆ ಅನುಭವಿಸುತ್ತಿದೆ.
ಕಾಂಗ್ರೆಸ್ ನ ಘಟಾನುಘಟಿ ನಾಯಕರೇ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, 70 ಸದಸ್ಯ ಬಲದ ದೆಹಲಿ ವಿಧಾನ ಸಭೆಗೆ ಫೆ.5ರಂದು ನಡೆದ ಚುನಾವಣೆಯಲ್ಲಿ ಶೇ 60.54 ರಷ್ಟು ಮತದಾನವಾಗಿತ್ತು. ಇಂದು (ಶನಿವಾರ) ಬೆಳಿಗ್ಗೆ 8 ಗಂಟೆಯಿಂದ ರಾಷ್ಟ್ರ ರಾಜಧಾನಿಯಾದ್ಯಂತ 19 ಕೇಂದ್ರಗಳಲ್ಲಿ ಬಿಗಿ ಭದ್ರತೆಯ ನಡುವೆ ಮತ ಎಣಿಕೆ ಪ್ರಕ್ರಿಯೆ ಶುರುವಾಗಿದೆ.
ಈ ವರೆಗಿನ ಫಲಿತಾಂಶಗಳ ಅನ್ವಯ ಒಟ್ಟು 70ಕ್ಷೇತ್ರಗಳ ಪೈಕಿ ಬಿಜೆಪಿ 43 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಎಎಪಿ 27 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದ್ದು, ತಾನು ಸ್ಪರ್ಧಿಸಿದ್ದ ಎಲ್ಲ ಕ್ಷೇತ್ರಗಳಲ್ಲೂ ಹಿನ್ನಡೆಯಲ್ಲಿದೆ.
'ಕಾಂಗ್ರೆಸ್ ಕಿಂಗ್ ಮೇಕರ್ ಆಗಲಿದೆ'
ಕಾಂಗ್ರೆಸ್ ನಾಯಕ ವಿಶೇಷ್ ಟೋಕಾಸ್ ಫಲಿತಾಂಶದ ಕುರಿತು ಮಾತನಾಡಿದ್ದು, ತಮ್ಮ ಪಕ್ಷವು "ಕಿಂಗ್-ಮೇಕರ್" ಆಗಿ ಹೊರಹೊಮ್ಮುವ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. 'ಕಾಂಗ್ರೆಸ್ ಬೆಂಬಲವಿಲ್ಲದೆ ದೆಹಲಿಯಲ್ಲಿ ಯಾವುದೇ ಸರ್ಕಾರ ರಚನೆಯಾಗುವುದಿಲ್ಲ. ಕಾಂಗ್ರೆಸ್ ನಿರೀಕ್ಷೆಗಿಂತ ಹೆಚ್ಚಿನ ಸ್ಥಾನಗಳನ್ನು ಪಡೆಯುತ್ತದೆ. ಕಾಂಗ್ರೆಸ್ ನಿರೀಕ್ಷೆಗಿಂತ ಹೆಚ್ಚಿನ ಸ್ಥಾನಗಳನ್ನು ಪಡೆಯುತ್ತದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಕಿಂಗ್-ಮೇಕರ್ ಆಗಿರುತ್ತದೆ ಎಂದು ಹೇಳಿದರು.
ಆದರೆ ಆರ್‌ಕೆ ಪುರಂ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ನಾಯಕ ಟೋಕಾಸ್ ಅವರೇ ಹಿನ್ನಡೆಯಲ್ಲಿದೆ.
ಶೂನ್ಯದಲ್ಲೂ ಹ್ಯಾಟ್ರಿಕ್ ಸಾಧನೆ!
ಇನ್ನು ದೆಹಲಿ ಚುನಾವಣೆಗೆ ಸಂಬಂಧಿಸಿದಂತೆ ಈ ಹಿಂದೆ ಪ್ರಕಟವಾಗಿದ್ದ ಆರು ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎರಡು ಸಮೀಕ್ಷೆಗಳು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಶೂನ್ಯ ಸ್ಥಾನಗಳು ದೊರೆಯಲಿವೆ ಎಂದು ಭವಿಷ್ಯ ನುಡಿದಿದ್ದವು. ಇಂದು ಫಲಿತಾಂಶಗಳು ಪ್ರಕಟವಾಗುತ್ತಿದ್ದು, ಈ ಎರಡೂ ಸಮೀಕ್ಷೆ ನಿಜವಾಗುತ್ತಿದೆ. ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ರಾಷ್ಟ್ರ ರಾಜಧಾನಿಯಲ್ಲಿ ಒಂದೇ ಒಂದು ಸ್ಥಾನ ಪಡೆಯಲೂ ವಿಫಲವಾಗಿದೆ. ಆ ಮೂಲಕ ದೆಹಲಿಯಲ್ಲೂ ಕಾಂಗ್ರೆಸ್ ಪುನರುಜ್ಜೀವನದ ಯಾವುದೇ ಲಕ್ಷಣಗಳಿಲ್ಲದೆ ನಿರಂತರ ಕುಸಿತ ಕಾಣುತ್ತಿದೆ ಎನ್ನಲಾಗಿದೆ.
ಅಂದಹಾಗೆ ದೆಹಲಿಯಲ್ಲಿ ಕಾಂಗ್ರೆಸ್‌ನ ಅವನತಿ 2015 ರಲ್ಲಿ ಪ್ರಾರಂಭವಾಯಿತು, ಅದು ಎಲ್ಲಾ 70 ಸ್ಥಾನಗಳಲ್ಲೂ ಕಾಂಗ್ರೆಸ್ ಸೋತಿತ್ತು. ಬಳಿಕ 2020 ರ ಸಮೀಕ್ಷೆಯ ಫಲಿತಾಂಶವು ಪುನರಾವರ್ತನೆಯಾಯಿತು. ಶೀಲಾ ದೀಕ್ಷಿತ್ ನೇತೃತ್ವದಲ್ಲಿ ದೆಹಲಿಯಲ್ಲಿ ಒಂದು ಕಾಲದಲ್ಲಿ ಪ್ರಬಲ ಶಕ್ತಿಯಾಗಿದ್ದ ಕಾಂಗ್ರೆಸ್, ಈಗ ಎಎಪಿ ಮತ್ತು ಬಿಜೆಪಿ ಪ್ರಾಬಲ್ಯ ಹೊಂದಿರುವ ರಾಜಕೀಯ ಭೂದೃಶ್ಯದಲ್ಲಿ ಪ್ರಸ್ತುತತೆಯನ್ನು ಮರಳಿ ಪಡೆಯಲು ಹೆಣಗಾಡುತ್ತಿದೆ. ಅಲ್ಲದೆ ಸತತ ಮೂರು ಚುನಾವಣೆಗಳಲ್ಲಿ ಶೂನ್ಯ ಸಾಧನೆ ಮಾಡಿದ ಕುಖ್ಯಾತಿಗೆ ಪಾತ್ರವಾಗಿದೆ.
Advertisement