
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸೋಲು ಕಂಡ ಬೆನ್ನಲ್ಲೇ ಅದೇ ಪಕ್ಷದ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ಎಎಪಿಯನ್ನು ಕೌರವ ಪಡೆಗೆ ಹೋಲಿಸಿ, ಮಹಾಭಾರತದ 'ದ್ರೌಪದಿ' ವಸ್ತ್ರಾಪಹರಣ ಚಿತ್ರ ಪೋಸ್ಟ್ ಮಾಡಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಎಎಪಿ ಸೋಲಿನ ರುಚಿ ಕಂಡಿದ್ದು, ಬರೊಬ್ಬರಿ 26 ವರ್ಷಗಳ ಬಳಿಕ ಬಿಜೆಪಿ ದೆಹಲಿ ಆಡಳಿತ ಚುಕ್ಕಾಣಿ ಹಿಡಿಯುತ್ತಿದೆ. ದೆಹಲಿ ಸಿಎಂ ಆಗಿದ್ದ ಅತಿಶಿ ಮರ್ಲೆನಾ ಹೊರತುಪಡಿಸಿ ಬಹುತೇಕ ಎಲ್ಲಾ ಪ್ರಮುಖ ಆಪ್ ನಾಯಕರು ಸೋಲು ಕಂಡಿದ್ದಾರೆ. ಅರವಿಂದ್ ಕೇಜ್ರಿವಾಲ್, ಮನೀಷ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಸೇರಿದಂತೆ ಎಲ್ಲಾ ಪ್ರಮುಖರು ಸೋಲಿನ ಹಾದಿ ಹಿಡಿದಿದ್ದಾರೆ. ಇನ್ನೊಂದೆಡೆ ಬಿಜೆಪಿ ಭಾರೀ ಬಹುಮತದೊಂದಿಗೆ ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ.
Swati Maliwal 'ದ್ರೌಪದಿ' ಪೋಸ್ಟ್
ಈ ಹಿಂದೆ ತಮ್ಮ ದೇ ಎಎಪಿ ಪಕ್ಷದ ವಿರುದ್ಧ ಸಮರವನ್ನೇ ಸಾರಿದ್ದ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ದ್ರೌಪದಿ ಪೋಸ್ಟ್ ಮಾಡುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಗೆ ಸೋಲಾದ ಬೆನ್ನಲ್ಲೇ ತಮ್ಮದೇ ಪಕ್ಷವನ್ನು ಕೌರವರಿಗೆ ಹೋಲಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಮಹಾಭಾರತದ ದ್ರೌಪದಿ ವಸ್ತ್ರಾಪಹರಣದ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಅರವಿಂದ್ ಕೇಜ್ರಿವಾಲ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಇಡೀ ಪಕ್ಷವನ್ನು ಕೌರವರಿಗೆ ಹೋಲಿಸಿದ್ದು, ಇಡೀ ಪೋಸ್ಟ್‌ನಲ್ಲಿ ಯಾವುದೇ ಬರಹವನ್ನಾಗಲಿ ಅವರು ಬರೆದಿಲ್ಲ. ಕೇವಲ ಫೋಟೋ ಮಾತ್ರವೇ ಹಂಚಿಕೊಳ್ಳುವ ಮೂಲಕ ತಾವು ಹೇಳಬೇಕಂದಿದ್ದ ವಿಚಾರವನ್ನು ತಿಳಿಸಿದ್ದಾರೆ.
ಇನ್ನು ಸ್ವಾತಿ ಮಲಿವಾಲ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಟ್ವಿಟರ್ ಖಾತೆದಾರರೊಬ್ಬರು, ಇಡೀ ಆಪ್ ಅಲೆಯನ್ನು ಒಬ್ಬಳೇ ಮಹಿಳೆ ಏಕಾಂಗಿಯಾಗಿ ಧ್ವಂಸ ಮಾಡಿದ್ದಾರೆ ಎಂದು ಬರೆದಿದ್ದಾರೆ. ನೀವು ಇಡೀ ದೆಹಲಿ ಚುನಾವಣೆಯ ಗೇಮ್ ಚೇಂಜರ್ ಎಂದು ಇನ್ನೊಬ್ಬರು ಶ್ಲಾಘನೆ ಮಾಡಿದ್ದಾರೆ.
ಸ್ವಾತಿ ಮೇಲೆ ಕೇಜ್ರಿವಾಲ್ ಸಿಬ್ಬಂದಿ ಹಲ್ಲೆ
ಇನ್ನು ಈ ಹಿಂದೆ ಇದೇ ಸ್ವಾತಿ ಮಲಿವಾಲ್ ಮೇಲೆ ಆಗಿನ ಸಿಎಂ ಆಗಿದ್ದ ಅರವಿಂದ್ ಕೇಜ್ರಿವಾಲ್ ಅವರ ಕಚೇರಿಯ ಸಿಬ್ಬಂದಿಗಳು ಹಲ್ಲೆ ಮಾಡಿದ್ದ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಈ ಬೆಳವಣಿಗೆ ಬಳಿಕ ಸ್ವಾತಿ ಮಲಿವಾಲ್ ತಮ್ಮದೇ ಪಕ್ಷದ ವಿರುದ್ಧ ತೊಡೆ ತಟ್ಟಿ ನಿಂತಿದ್ದರು. ಬಹಿರಂಗವಾಗಿಯೇ ಕೇಜ್ರಿವಾಲ್ ಮತ್ತು ಅವರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದರು.
Advertisement