
ಪಾಟ್ನಾ: ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಶುಕ್ರವಾರ ಪೊಲೀಸರೊಂದಿಗೆ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ತಲೆಗೆ 50,000 ರೂ. ಬಹುಮಾನ ಹೊಂದಿದ್ದ ನಟೋರಿಯಸ್ ಕ್ರಿಮಿನಲ್ ಮನೀಶ್ ಯಾದವ್ ಹತನಾಗಿದ್ದಾನೆ.
ಗುಂಡಿನ ಚಕಮಕಿಯಲ್ಲಿ ವಿಶೇಷ ಕಾರ್ಯಪಡೆ(ಎಸ್‌ಟಿಎಫ್)ಯ ಕಾನ್‌ಸ್ಟೆಬಲ್ ಕೂಡ ಗಾಯಗೊಂಡಿದ್ದಾರೆ. ಗಾಯಗೊಂಡ ರೋಷನ್ ಕುಮಾರ್ ಅವರನ್ನು ಚಿಕಿತ್ಸೆಗಾಗಿ ಗೋಪಾಲ್‌ಗಂಜ್‌ನ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಗೋಪಾಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರ ಖುರ್ದ್ ಗ್ರಾಮದ ಬಳಿ ಮನೀಶ್ ಮತ್ತು ಅವರ ಸಹಚರರು ದೊಡ್ಡ ಅಪರಾಧ ಎಸಗಲು ಒಟ್ಟುಗೂಡಿದ್ದರು. ಖಚಿತ ಮಾಹಿತಿ ಪಡೆದ ಎಸ್‌ಟಿಎಫ್ ಮತ್ತು ಜಿಲ್ಲಾ ಪೊಲೀಸರ ಜಂಟಿ ತಂಡ ರಾಂಪುರ ಖುರ್ದ್ ಗ್ರಾಮಕ್ಕೆ ತೆರಳಿ, ಮನೀಶ್ ಗೆ ಶರಣಾಗುವಂತೆ ಸೂಚಿಸಿದ್ದಾರೆ.
ಆದರೆ ಕಾಲುವೆಯ ಕೆಳಗೆ ಅಡಗಿಕೊಂಡಿದ್ದ ಮನೀಶ್ ಪೊಲೀಸರ ಮೇಲೆ ಗುಂಡು ಹಾರಿಸಿದ್ದರಿಂದ ಕಾನ್‌ಸ್ಟೆಬಲ್ ರೋಷನ್‌ಗೆ ಗಾಯವಾಯಿತು. ತಕ್ಷಣ ಎಚ್ಚೆತ್ತ ಪೊಲೀಸರು ಆತ್ಮರಕ್ಷಣೆಗಾಗಿ ಮನೀಶ್ ಮೇಲೆ ಗುಂಡು ಹಾರಿಸಿದ್ದಾರೆ. ಮನೀಶ್ ಮತ್ತು ಗಾಯಗೊಂಡ ಕಾನ್‌ಸ್ಟೆಬಲ್ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಪರಾಧಿ ಸಾವನ್ನಪ್ಪಿದ್ದಾನೆ ಎಂದು ವೈದರು ಘೋಷಿಸಿದರು.
ಪೊಲೀಸ್ ಎನ್‌ಕೌಂಟರ್‌ನಲ್ಲಿ ಅಪರಾಧಿ ಮನೀಶ್ ಯಾದವ್ ಸಾವನ್ನಪ್ಪಿದ್ದಾನೆ ಎಂದು ಗೋಪಾಲ್‌ಗಂಜ್ ಪೊಲೀಸ್ ವರಿಷ್ಠಾಧಿಕಾರಿ ಅವದೇಶ್ ದೀಕ್ಷಿತ್ ದೃಢಪಡಿಸಿದ್ದಾರೆ.
ಮನೀಶ್ ವಿರುದ್ಧ ಕೊಲೆ, ಕೊಲೆ ಯತ್ನ ಮತ್ತು ಸುಲಿಗೆ ಪ್ರಕರಣಗಳು ಸೇರಿದಂತೆ ಹಲವು ಕೇಸ್ ಗಳಿವೆ ಎಂದು ಎಸ್‌ಪಿ ದೀಕ್ಷಿತ್ ಬಹಿರಂಗಪಡಿಸಿದ್ದಾರೆ. ಅಲ್ಲದೆ ಮನೀಶ್ ತಲೆಗೆ ಸರ್ಕಾರ 50,000 ರೂ. ಬಹುಮಾನ ಘೋಷಿಸಿತ್ತು.
Advertisement