
ನವದೆಹಲಿ: ದೆಹಲಿಯ ಜನ "ಭ್ರಷ್ಟಾಚಾರ ಮತ್ತು ಸುಳ್ಳುಗಳಿಂದ ಬೇಸತ್ತಿದ್ದರು... ಅವರು ಉತ್ತಮ ಆಡಳಿತವನ್ನು ಬಯಸುತ್ತಾರೆ. ನಾಟಕೀಯತೆಯಲ್ಲ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ದೆಹಲಿಯಲ್ಲಿ ಬಿಜೆಪಿಯ ಅದ್ಭುತ ಗೆಲುವಿನ ನಂತರ ಇಂದು ಸಂಜೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 27 ವರ್ಷಗಳ ಬಳಿಕ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ದೆಹಲಿಯಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ “ಡಬಲ್ ಸ್ಪೀಡ್”ನಲ್ಲಿ ಅಭಿವೃದ್ಧಿಯನ್ನು ಜನರು ನಿರೀಕ್ಷಿಸಬಹುದು ಎಂದು ಭರವಸೆ ನೀಡಿದರು.
ಇದು "ಅಭಿವೃದ್ಧಿ, ದೃಷ್ಟಿಕೋನ ಮತ್ತು ನಂಬಿಕೆಯ" ಗೆಲುವು. ಇಂದಿನ ಗೆಲುವು ಐತಿಹಾಸಿಕ. ಇದು ಸಾಮಾನ್ಯ ವಿಜಯವಲ್ಲ. ದೆಹಲಿಯ ಜನರು ‘ಆಪ್ದಾ’ವನ್ನು ಓಡಿಸಿದ್ದಾರೆ. ದೆಹಲಿಯನ್ನು ‘ಆಪ್ದಾ’ದಿಂದ ಮುಕ್ತಗೊಳಿಸಲಾಗಿದೆ. ದೆಹಲಿಯ ಜನಾದೇಶ ಸ್ಪಷ್ಟವಾಗಿದೆ.
"ಭ್ರಷ್ಟಾಚಾರದ ವಿರುದ್ಧದ ಹೋರಾಟದಿಂದ ಹುಟ್ಟಿದ ಪಕ್ಷವು ಈಗ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ... ಅವರ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವರು ಜೈಲಿಗೆ ಹೋದರು. ಮದ್ಯ ಹಗರಣ, ಶಾಲಾ ಹಗರಣ ದೆಹಲಿಯ ಪ್ರತಿಷ್ಠೆಗೆ ಧಕ್ಕೆ ತಂದಿತ್ತು. ದೆಹಲಿ ಜನ ಕೋವಿಡ್‌ನಿಂದ ಬಳಲುತ್ತಿದ್ದಾಗ, ಅವರು ಶೀಶ್ ಮಹಲ್ ಅನ್ನು ನಿರ್ಮಿಸುತ್ತಿದ್ದರು ಎಂದು ಕೇಜ್ರಿವಾಲ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಮೋದಿ, "ಭಾರತದ ಅತ್ಯಂತ ಹಳೆಯ ಪಕ್ಷವು ದೆಹಲಿಯಲ್ಲಿ ಆರು ಚುನಾವಣೆಗಳಲ್ಲಿ(ಲೋಕಸಭೆ ಮತ್ತು ವಿಧಾನಸಭೆ) ತನ್ನ ಖಾತೆಯನ್ನು ತೆರೆಯಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಒಂದು ಪರಾವಲಂಬಿ ಪಕ್ಷ ಎಂದು ನಾನು ನಿಮಗೆ ಹೇಳಿದ್ದೆ. ಅವರು ಮುಳುಗಿದಾಗಲೆಲ್ಲಾ ಇತರ ಪಕ್ಷವನ್ನು ತಮ್ಮೊಂದಿಗೆ ತೆಗೆದುಕೊಂಡು ಮುಳುಗುತ್ತಾರೆ ಎಂದು ಟೀಕಿಸಿದರು.
ದೆಹಲಿಯಲ್ಲಿ ಇನ್ಮುಂದೆ ಡಬಲ್ ಎಂಜಿನ್ ಸರ್ಕಾರ ಇರಲಿದೆ. ಪ್ರತಿ ವರ್ಗದವರು ನಮಗೆ ಮತ ನೀಡಿದ್ದಾರೆ. ಇದು ಅಭಿವೃದ್ಧಿ ಸಿಕ್ಕಿರುವ ಗೆಲುವು. ದೆಹಲಿ ಮಹಿಳೆಯರು ಆಶೀರ್ವಾದ ಮಾಡಿದ್ದಾರೆ. ರಾಜಕೀಯದಲ್ಲಿ ಸುಳ್ಳಿಗೆ ಅವಕಾಶ ಇಲ್ಲ. ಇನ್ಮುಂದೆ ನಾವು ದೆಹಲಿಗೆ ಹೊಸ ರೂಪ ಕೊಡಲಿದ್ದೇವೆ ಎಂದು ಪ್ರಧಾನಿ ಭರವಸೆ ನೀಡಿದರು.
Advertisement