
ತಿರುವನಂತಪುರ: ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶದಿಂದ ಬಿಜೆಪಿ ಸಂಭ್ರಮದ ಅಲೆಯಲ್ಲಿ ತೇಲುತ್ತಿರುವಂತೆಯೇ, ಕೇರಳದಲ್ಲಿಯೂ ಇದೇ ರೀತಿಯ ಫಲಿತಾಂಶಕ್ಕೆ ಸಿಎಂ ಪಿಣರಾಯಿ ವಿಜಯನ್ ಸಿದ್ಧರಾಗಿರುವಂತೆ ಬಿಜೆಪಿ ನಾಯಕ ವಿ.ಮುರಳೀಧರನ್ ಶನಿವಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುರಳೀಧರನ್, ಇಂದು ದೆಹಲಿ, ನಾಳೆ ಕೇರಳದಲ್ಲಿಯೂ ಗೆಲ್ಲುತ್ತೇವೆ. ರಾಷ್ಟ್ರ ರಾಜಧಾನಿಯಲ್ಲಿನ ಚುನಾವಣಾ ಫಲಿತಾಂಶವು ಭ್ರಷ್ಟರಿಗೆ ಕಾದಿರುವ ಭವಿಷ್ಯದ ಮುನ್ಸೂಚನೆಯಾಗಿದೆ ಎಂದರು.
ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮದ್ಯ ಹಗರಣ ಮತ್ತಿತರ ಭ್ರಷ್ಟಾಚಾರದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ತನ್ನ ಎದುರಾಳಿಗಳು ರಾಜಕೀಯವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಅವರ ಹೇಳಿಕೆಯನ್ನು ಜನರು ನಂಬಲಿಲ್ಲ. ಭ್ರಷ್ಟ ಜನರನ್ನು ಅಧಿಕಾರಿದಿಂದ ಜನರು ಕೆಳಗೆ ಇಳಿಸಲಿದ್ದಾರೆ ಎಂಬ ಸಂದೇಶವನ್ನು ಚುನಾವಣಾ ಫಲಿತಾಂಶ ನೀಡಿದೆ. ಇದು ಭ್ರಷ್ಟಾಚಾರ ಮತ್ತು ದುರಂಹಕಾರದ ವಿರುದ್ಧದ ಗೆಲುವು ಆಗಿದೆ ಎಂದು ತಿಸಿದರು.
ಉತ್ತರ ಪ್ರದೇಶ ಮತ್ತು ಹರಿಯಾಣ ಸರ್ಕಾರಗಳ ಆಡಳಿತವನ್ನು ನೋಡಿ ದೆಹಲಿಯ ಜನರು 'ಡಬಲ್ ಇಂಜಿನ್' ಸರ್ಕಾರವನ್ನು ಬಯಸಿದ್ದಾರೆ. ವಿಜಯನ್ ಅವರಿಗೆ ಕೇಜ್ರಿವಾಲ್ ಆಪ್ತರಾಗಿದ್ದರು. ದೆಹಲಿ ಮದ್ಯ ಹಗರಣದಲ್ಲಿ ಭಾಗಿಯಾಗಿರುವ ವ್ಯಕ್ತಿಯೊಬ್ಬರಿಗೆ ರಾಜ್ಯದ ಪಾಲಕ್ಕಾಡ್ ಜಿಲ್ಲೆಯಲ್ಲಿ ಮದ್ಯ ಘಟಕ ಸ್ಥಾಪಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ದೆಹಲಿ ಚುನಾವಣಾ ಫಲಿತಾಂಶ ಪಿಣರಾಯಿ ವಿಜಯನ್‌ಗೆ ಪಾಠವಾಗಬೇಕು. ಕೇರಳದಲ್ಲಿಯೂ ಮುಂದೆ ಇದೇ ರೀತಿ ಆಗಲಿದೆ ಎಂದು ಅವರು ಹೇಳಿದರು.
ಚುನಾವಣಾ ಆಯೋಗದ ಇತ್ತೀಚಿನ ಅಂಕಿಅಂಶಗಳ ಪ್ರಕಾರ ದೆಹಲಿ ವಿಧಾನಸಭೆಯ 70 ಸ್ಥಾನಗಳಲ್ಲಿ ಬಿಜೆಪಿ 40 ಸ್ಥಾನಗಳನ್ನು ಮತ್ತು ಎಎಪಿ 19 ಸ್ಥಾನಗಳನ್ನು ಗೆದ್ದಿದೆ. 26 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚಿಸಲು ಸಜ್ಜಾಗಿದೆ.
Advertisement