
ನವದೆಹಲಿ: ಮುಖ್ಯಮಂತ್ರಿ ಅಭ್ಯರ್ಥಿಯನ್ನೇ ಘೋಷಣೆ ಮಾಡದೆ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣೆ ಎದುರಿಸಿ, ದೆಹಲಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಆದರೆ, 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಪಕ್ಷದ ಮೊದಲ ಸರ್ಕಾರವನ್ನು ಮುನ್ನಡೆಸುವವರು ಯಾರು ಎಂಬ ಕುರಿತು ಕುತೂಹಲಗಳು ಮೂಡಿದ್ದು, ಹಲವು ಊಹಾಪೋಹಗಳೂ ಶುರುವಾಗಿವೆ.
ಮುಖ್ಯಮಂತ್ರಿ ಯಾರಾಗುತ್ತಾರೆಂಬುದನ್ನು ಬಿಜೆಪಿ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚದೇವ ಅವರು ಹೇಳಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಬನ್ಸುರಿ ಸ್ವರಾಜ್, ವೀರೇಂದ್ರ ಸಚದೇವ, ಪ್ರವೇಶ್ ವರ್ಮಾ, ವಿಜೇಂದರ್ ಗುಪ್ತಾ, ಮನೋಜ್ ತಿವಾರಿ, ಸತೀಶ್ ಉಪಾಧ್ಯಾಯ, ಮಂಜಿಂದರ್ ಸಿಂಗ್ ಸಿರ್ಸಾ ಮತ್ತು ರೇಖಾ ಗುಪ್ತಾ ಸೇರಿದಂತೆ ಹಲವರ ಹೆಸರುಗಳು ಕೇಳಿಬರುತ್ತಿವೆ.
ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬನ್ಸುರಿ ಸ್ವರಾಜ್ ಅವರು ಪಕ್ಷದ ರಾಜ್ಯ ಮತ್ತು ಕೇಂದ್ರ ನಾಯಕತ್ವದಲ್ಲಿ ಖ್ಯಾತಿಯನ್ನು ಹೊಂದಿದ್ದು, ಅವರ ತಾಯಿ ದೆಹಲಿಯ ಕೊನೆಯ ಬಿಜೆಪಿ ಮುಖ್ಯಮಂತ್ರಿಯಾಗಿದ್ದರು.
ಪಕ್ಷದ ದೆಹಲಿ ಅಧ್ಯಕ್ಷರಾಗಿರುವ ಸಚದೇವ ಅವರು ಕೇಂದ್ರ ನಾಯಕತ್ವದ ಬೆಂಬಲವನ್ನು ಹೊಂದಿದ್ದಾರೆ. ಬಿಜೆಪಿ ಜಾಟ್ ನಾಯಕನನ್ನು ಆಯ್ಕೆ ಮಾಡಲು ಬಯಸಿದ್ದೇ ಆದರೆ, ಪ್ರವೇಶ್ ವರ್ಮಾ ಅವರನ್ನು ಆಯ್ಕೆ ಮಾಡಬಹುದು ಎಂದು ಹೇಳಲಾಗುತ್ತಿದೆ.
ಮನೋಜ್ ತಿವಾರಿ ದೆಹಲಿಯ ಜನಪ್ರಿಯ ವ್ಯಕ್ತಿಯಾಗಿದ್ದು, ಭೋಜ್‌ಪುರಿ ಚಲನಚಿತ್ರ ನಟನಾಗಿ ಸಾಕಷ್ಟು ಬೆಂಬಲವನ್ನು ಹೊಂದಿದ್ದಾರೆ.
ಇನ್ನು ದೆಹಲಿ ಬಿಜೆಪಿಯ ಮಾಜಿ ಅಧ್ಯಕ್ಷ ಸತೀಶ್ ಉಪಾಧ್ಯಾಯ ಅವರು, 1990 ರ ದಶಕದಿಂದಲೂ ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಮೂರು ಬಾರಿ ಶಾಸಕ ಮತ್ತು ದೆಹಲಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸಾಕಷ್ಟು ಅನುಭವ ಹೊಂದಿರುವ ವಿಜೇಂದರ್ ಗುಪ್ತಾ ಅವರನ್ನೂ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಪರಿಗಣಿಸಬರುದು. ಮಂಜಿಂದರ್ ಸಿಂಗ್ ಸಿರ್ಸಾ ದೆಹಲಿ ರಾಜಕೀಯದಲ್ಲಿ ಪ್ರಮುಖ ಪಂಜಾಬಿ ನಾಯಕರಾಗಿದ್ದಾರೆ.
ರೇಖಾ ಗುಪ್ತಾ ವ್ಯಾಪಕ ಸಾರ್ವಜನಿಕ ಸೇವಾ ಅನುಭವ ಹೊಂದಿದ್ದು, ಈ ಹಿಂದೆ ಕೌನ್ಸಿಲರ್ ಕೂಡ ಆಗಿದ್ದರು. ರೇಖಾ ಅವರು ಶಾಲಿಮಾರ್ ಬಾಗ್‌ನಲ್ಲಿ ಎಎಪಿಯ ವಂದನಾ ಕುಮಾರಿಯನ್ನು ಸೋಲಿಸಿದ್ದರು. ಇದಲ್ಲದೆ,ಒಬಿಸಿ ಅಥವಾ ಜಾಟ್ ಸಮುದಾಯಗಳಿಂದ ಯಾರನ್ನಾದರೂ ಮುಖ್ಯಮಂತ್ರಿಯಾಗಿಯೂ ಪರಿಗಣಿಸುವ ಸಾಧ್ಯತೆಗಳಿವೆ.
Advertisement