
ನವದೆಹಲಿ: ದೇಶದಲ್ಲಿ ಸುಮಾರು 14 ಕೋಟಿ ಜನ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರ ಜನಗಣತಿಯನ್ನು ಆದಷ್ಟು ಬೇಗ ನಡೆಸಬೇಕು ಎಂದು ಸೋಮವಾರ ಒತ್ತಾಯಿಸಿದ್ದಾರೆ.
ಇಂದು ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸೋನಿಯಾ ಗಾಂಧಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಫಲಾನುಭವಿಗಳನ್ನು 2011 ರ ಜನಗಣತಿಯ ಪ್ರಕಾರ ಗುರುತಿಸಲಾಗುತ್ತಿದೆ. ಇತ್ತೀಚಿನ ಜನಸಂಖ್ಯಾ ಸಂಖ್ಯೆಗಳ ಪ್ರಕಾರ ಅಲ್ಲ ಎಂದು ಹೇಳಿದರು.
ಯುಪಿಎ ಸರ್ಕಾರ ಸೆಪ್ಟೆಂಬರ್ 2013 ರಲ್ಲಿ ಜಾರಿಗೆ ತಂದ ಎನ್‌ಎಫ್‌ಎಸ್‌ಎ ದೇಶದ 140 ಕೋಟಿ ಜನಸಂಖ್ಯೆಗೆ ಆಹಾರ ಮತ್ತು ಪೌಷ್ಠಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕಿ ತಿಳಿಸಿದರು.
ಈ ಕಾಯ್ದೆಯು ಲಕ್ಷಾಂತರ ದುರ್ಬಲ ಕುಟುಂಬಗಳನ್ನು ಹಸಿವಿನಿಂದ ರಕ್ಷಿಸುವಲ್ಲಿ, ವಿಶೇಷವಾಗಿ ಕೋವಿಡ್ -19 ಬಿಕ್ಕಟ್ಟಿನ ಸಮಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಸೋನಿಯಾ ಗಾಂಧಿ ಹೇಳಿದರು.
ಫಲಾನುಭವಿಗಳ ಕೋಟಾವನ್ನು ಇನ್ನೂ 2011 ರ ಜನಗಣತಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತಿದೆ, ಅದು ಈಗ ಒಂದು ದಶಕಕ್ಕೂ ಹೆಚ್ಚು ಹಳೆಯದು ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013, ಗುರಿಪಡಿಸಿದ ಸಾರ್ವಜನಿಕ ವಿತರಣಾ ವ್ಯವಸ್ಥೆ(TPDS) ಅಡಿಯಲ್ಲಿ ಹೆಚ್ಚಿನ ಸಬ್ಸಿಡಿ ಆಹಾರ ಧಾನ್ಯಗಳನ್ನು ಪಡೆಯಲು ಗ್ರಾಮೀಣ ಪ್ರದೇಶದ ಶೇಕಡಾ 75 ರಷ್ಟು ಮತ್ತು ನಗರ ಜನಸಂಖ್ಯೆಯ ಶೇಕಡಾ 50 ರಷ್ಟು ಜನರಿಗೆ ಅವಕಾಶ ನೀಡುತ್ತದೆ.
ಪ್ರಸ್ತುತ, ಸರ್ಕಾರವು ಆಹಾರ ಭದ್ರತಾ ಕಾನೂನಿನಡಿಯಲ್ಲಿ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಉಚಿತ ಆಹಾರ ಧಾನ್ಯಗಳನ್ನು ಒದಗಿಸುತ್ತಿದೆ.
"ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ಹತ್ತು ವರ್ಷಗಳು ಕಳೆದರೂ ಜನಗಣತಿ ನಡೆಸಿಲ್ಲ. 2021ರಲ್ಲಿಯೇ ಜನಗಣತಿ ನಿಗದಿಪಡಿಸಲಾಗಿತ್ತು. ಆದರೆ ಇದುವರೆಗೂ ನಡೆಸಿಲ್ಲ ಮತ್ತು ಜನಗಣತಿಯನ್ನು ಯಾವಾಗ ನಡೆಸಲಾಗುತ್ತದೆ ಎಂಬುದರ ಕುರಿತು ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ" ಎಂದು ಅವರು ಹೇಳಿದರು.
Advertisement