

ಭೋಪಾಲ್: ಸಾವು ಯಾರಿಗೆ ಹೇಗೆ ಬರುತ್ತದೆ ಎಂಬುದು ಯಾರಿಗೂ ತಿಳಿಯುವುದಿಲ್ಲ.. ಅಂತೆಯೇ ಇಲ್ಲೋರ್ವ ಯುವತಿ ತನ್ನ ಸಹೋದರಿ ವಿವಾಹದ ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದಾಗಲೇ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿರುವ ವಿಡಿಯೋ ವೈರಲ್ ಆಗುತ್ತಿದೆ.
ಮಧ್ಯಪ್ರದೇಶ ವಿದಿಶಾದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸಹೋದರಿಯ ವಿವಾಹ ಸಮಾರಂಭದಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡುವಾಗ ಹೃದಯಾಘಾತಕ್ಕೆ (heart attack) ಒಳಗಾಗಿ 23 ವರ್ಷದ ಯುವತಿ ಪರಿಣಿತಾ ಜೈನ್ (Parinita Jain) ಕುಸಿದು ಸಾವನ್ನಪ್ಪಿದ್ದಾರೆ. ಪರಿಣಿತಾ ಜೈನ್ ಇಂದೋರ್ ನಿವಾಸಿಯಾಗಿದ್ದು, ಆಕೆ ಎಂಬಿಎ ಪದವಿ ವ್ಯಾಸಂಗ ಮಾಡುತ್ತಿದ್ದರು ಮತ್ತು ಆಕೆಯ ಸಹೋದರಿಯ ಮದುವೆಗಾಗಿ ವಿದಿಶಾಗೆ ಆಗಮಿಸಿದ್ದರು ಎನ್ನಲಾಗಿದೆ.
ಯುವತಿಯು ಆಶಾ ಭೋಸ್ಲೆ ಹಾಗೂ ಸೋನು ನಿಗಮ್ ಅವರು ಹಾಡಿರುವ ಶರಾರಾ…ಶರಾರಾ ಎಂಬ ಹಿಂದಿ ಗೀತೆಗೆ ಡ್ಯಾನ್ಸ್ ಮಾಡುವಾಗ ಆಕೆಗೆ ಹೃದಯಾಘಾತವಾಗಿದ್ದು, ಕೂಡಲೇ ವೇದಿಕೆ ಮೇಲೆಯೇ ಕುಸಿದು ಸಾವನ್ನಪ್ಪಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಯುವತಿ ವೇದಿಕೆ ಮೇಲೆ ಕುಸಿಯುತ್ತಿದ್ದಂತೆಯೇ ಅಲ್ಲಿದ್ದ ಸಂಬಂಧಿಕರು ಆಕೆಗೆ ಸಿಪಿಆರ್ ನೀಡಿದ್ದು, ಆಗಲೂ ಆಕೆ ಎಚ್ಚರಗೊಳ್ಳದ ಕಾರಣ ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವತಿಯ ಪ್ರಾಣ ವೇದಿಕೆಯಲ್ಲಿ ಹೃದಯಾಘಾತವಾಗಿ ಬಿದ್ದಾಗಲೇ ಸಾವಾಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಇನ್ನು ಪರಿಣಿತಾ ಅವರ 12 ವರ್ಷ ಸಹೋದರ ಕೂಡ ಈ ಹಿಂದೆ ಇದೇ ರೀತಿ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Advertisement