ನಾಲ್ಕು ವರ್ಷಗಳ ಬಳಿಕ ಪ್ರಣಬ್ ಮುಖರ್ಜಿ ಪುತ್ರ ಅಭಿಜಿತ್ ಮತ್ತೆ ಕಾಂಗ್ರೆಸ್ ಸೇರ್ಪಡೆ
ಕೋಲ್ಕತ್ತಾ: ನಾಲ್ಕು ವರ್ಷಗಳ ಬಳಿಕ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಬುಧವಾರ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಇಲ್ಲಿಯವರೆಗೂ ಅವರು ತೃಣಮೂಲ ಕಾಂಗ್ರೆಸ್ ನಲ್ಲಿದ್ದರು.
ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಪಶ್ಚಿಮ ಬಂಗಾಳ ಉಸ್ತುವಾರಿ ಅಹ್ಮದ್ ಮಿರ್ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದ ಮಾಜಿ ಸಂಸದರಿಗೆ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೀಡಲಾಯಿತು.
ರಾಷ್ಟ್ರ ಹಾಗೂ ರಾಜ್ಯ ನಾಯಕರು ಅವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ಬಾರಿಗೆ ಕಾಂಗ್ರೆಸ್ ಸೇರಿದ್ದೇನೆ. ಕಳೆದ ವರ್ಷ ಜೂನ್ ನಲ್ಲಿಯೇ ಪಕ್ಷ ಸೇರಲು ಬಯಸಿದ್ದೆ. ಆದರೆ, ವಿವಿಧ ರಾಜ್ಯಗಳ ಚುನಾವಣೆಯಿಂದಾಗಿ ಮುಂದೂಡಲ್ಪಟ್ಟಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮ ಇದು ನೆರವೇರಿದೆ ಎಂದು ತಿಳಿಸಿದರು.
ಜುಲೈ 2021ರಲ್ಲಿ ತೃಣ ಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಅಭಿಷೇಕ್ ಮುಖರ್ಜಿ ನಾಲ್ಕು ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ. ಪಶ್ಚಿಮ ಬಂಗಾಳದ ಜನರ ಪರವಾಗಿ ಹೋರಾಟ ನಡೆಸಲು ಪಕ್ಷದ ರಾಜ್ಯ ಘಟಕಕ್ಕೆ ಇದು ದೊಡ್ಡ ಹೆಜ್ಜೆಯಾಗಿದೆ ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಭಾಂಕರ್ ಸರ್ಕಾರ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ