
ನವದೆಹಲಿ: ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಯಾವುದೇ ಭದ್ರತೆ ಇಲ್ಲದೆ ಜನಸಮೂಹವೊಂದು ದೆಹಲಿ ಮೆಟ್ರೋ ನಿಲ್ದಾಣಕ್ಕೆ ನುಗ್ಗಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಬೆಂಗಳೂರಿನಲ್ಲಿ ಮೆಟ್ರೋ ರೈಲು ದರ ಏರಿಕೆ ವ್ಯಾಪಕ ಚರ್ಚೆಗೀಡಾಗಿರುವಂತೆಯೇ ಬೆಂಗಳೂರು ಮೆಟ್ರೋ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಅತ್ತ ದೆಹಲಿಯಲ್ಲಿ ಜನಸಮೂಹವೊಂದು ಏಕಾಏಕಿ ಮೆಟ್ರೋ ನಿಲ್ದಾಣಕ್ಕೆ ನುಗ್ಗಿದ್ದು, ಟಿಕೆಟ್ ಇಲ್ಲದೆ ಸೆಕ್ಯುರಿಟಿ ಚೆಕ್ ಇಲ್ಲದೇ ನಿಯಮಗಳನ್ನು ಗಾಳಿಗೆ ತೂರಿ ಮನಸೋ ಇಚ್ಚೆ ವರ್ತಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ ಗಳ ಅನ್ವಯ ಇತ್ತೀಚೆಗೆ ನಡೆದ ಶಬ್ ಇ ಬರಾತ್ ಹಬ್ಬದ ದಿನದಂದೇ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಸಾಮೂಹಿಕ ಪ್ರಾರ್ಥನೆಗೆ ಬಂದ ಯುವಕರು ಏಕಾಏಕಿ ಮೆಟ್ರೋ ನಿಲ್ದಾಣಕ್ಕೆ ನುಗ್ಗಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ದೆಹಲಿ ಪೊಲೀಸರು ಕುಲಂಕುಷ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತ ವಿಡಿಯೊವೊಂದು ವ್ಯಾಪಕ ವೈರಲ್ ಆಗುತ್ತಿದ್ದು, ಈ ವಿಡಿಯೋ ಯಾವಾಗ ಸೆರೆ ಹಿಡಿದದ್ದು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅಂತೆಯೇ ಇಷ್ಟು ಜನ ಏಕಾಏಕಿ ಮೆಟ್ರೋ ನಿಲ್ದಾಣಕ್ಕೆ ನುಗ್ಗಿದಾಗ ಅಲ್ಲಿದ್ದ ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement