
ಮಹಾರಾಷ್ಟ್ರ ಸರ್ಕಾರ ಲವ್ ಜಿಹಾದ್ ವಿರೋಧಿ ಕಾನೂನು ಜಾರಿಗೆ ಮುಂದಾಗಿದೆ.
ಇದಕ್ಕಾಗಿ ತಯಾರಿ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ, ಭವಿಷ್ಯದ ಕಾನೂನಿನಲ್ಲಿ ಅಳವಡಿಸಬಹುದಾದ ಅಂಶಗಳ ಬಗ್ಗೆ ಅಧ್ಯಯನ ನಡೆಸುವುದಕ್ಕಾಗಿ 7 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ.
ಏಳು ಸದಸ್ಯರ ಸಮಿತಿಯು ರಾಜ್ಯದ ಉನ್ನತ ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿರಲಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಲ್ಪಸಂಖ್ಯಾತ ವ್ಯವಹಾರಗಳು, ಕಾನೂನು ಮತ್ತು ನ್ಯಾಯಾಂಗ, ಸಾಮಾಜಿಕ ನ್ಯಾಯ, ವಿಶೇಷ ನೆರವು ಮತ್ತು ಗೃಹ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡಿರುತ್ತದೆ.
ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಮದುವೆಯಾಗುವಂತೆ ಆಮಿಷವೊಡ್ಡಿ ನಂತರ ಅವರನ್ನು ಇಸ್ಲಾಂಗೆ ಮತಾಂತರಿಸಲು ಪಿತೂರಿ ನಡೆಸುವುದಕ್ಕೆ "ಲವ್ ಜಿಹಾದ್" ಎಂಬ ಶಬ್ದ ಬಳಕೆಯಲ್ಲಿದೆ.
ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರ್ಕಾರ ರಚಿಸಿರುವ ಸಮಿತಿ ಬಲವಂತದ ಮತಾಂತರ ಮತ್ತು "ಲವ್ ಜಿಹಾದ್" ದೂರುಗಳನ್ನು ಎದುರಿಸಲು ಕ್ರಮಗಳನ್ನು ಸೂಚಿಸಲಿದೆ ಮತ್ತು ಅಂತಹ ಕೃತ್ಯಗಳನ್ನು ತಡೆಗಟ್ಟಲು ಶಾಸನವನ್ನು ಶಿಫಾರಸು ಮಾಡಲು ಇತರ ರಾಜ್ಯಗಳ ಕಾನೂನುಗಳನ್ನು ಅಧ್ಯಯನ ಮಾಡುತ್ತದೆ ಎಂದು ಸರ್ಕಾರಿ ನಿರ್ಣಯ ಹೇಳಿದೆ.
ಲವ್ ಜಿಹಾದ್ ನಿಗ್ರಹಕ್ಕೆ ಕಾನೂನು ಜಾರಿಗೆ ಮುಂದಾಗಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಧನ್ಯವಾದ ಹೇಳಿದ ಮಹಾರಾಷ್ಟ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಮಂಗಲ್ ಪ್ರಭಾತ್ ಲೋಧಾ, "ಲವ್ ಜಿಹಾದ್ ಗಂಭೀರ ವಿಷಯವಾಗಿದ್ದು, ಅಂತಹ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ. ಲವ್ ಜಿಹಾದ್ ಪ್ರಕರಣಗಳನ್ನು ಪರಿಹರಿಸಲು ಸ್ಥಾಪಿಸಲಾದ ಸಮಿತಿಯು ಮಹಿಳೆಯರ ರಕ್ಷಣೆ ಮತ್ತು ಸಾಂಸ್ಕೃತಿಕ ಮೌಲ್ಯಗಳ ಸಂರಕ್ಷಣೆಗಾಗಿ ಕೆಲಸ ಮಾಡುತ್ತದೆ" ಎಂದು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
"ಶ್ರದ್ಧಾ ವಾಲ್ಕರ್ ಅವರನ್ನು ಅಫ್ತಾಬ್ ಅಮೀನ್ ಕ್ರೂರವಾಗಿ ಹತ್ಯೆ ಮಾಡಿದ್ದ ಘಟನೆಯನ್ನು ಕಂಡಿದ್ದೇವೆ. ರೂಪಾಲಿ ಚಂದನ್ಶಿವೆ ಅವರನ್ನು ಇಕ್ಬಾಲ್ ಶೇಖ್ ಕೊಂದಿದ್ದಾನೆ. ಪೂನಂ ಕ್ಷೀರಸಾಗರ್ ಅವರನ್ನು ನಿಜಾಮ್ ಖಾನ್ ಹತ್ಯೆ ಮಾಡಿದ್ದಾನೆ. ಉರಾನ್‌ನ ಯಶಶ್ರೀ ಶಿಂಧೆ ಅವರನ್ನು ದಾವೂದ್ ಶೇಖ್ ಕೊಂದಿದ್ದಾನೆ. ಮಲಾಡ್‌ನ ಸೋನಮ್ ಶುಕ್ಲಾ ಅವರನ್ನು ಶಹಜಿಬ್ ಅನ್ಸಾರಿಯ ಕೈಯಲ್ಲಿ ಕಳೆದುಕೊಂಡಿದ್ದಾರೆ" ಎಂದು ಸಚಿವರು ಘಟನಾವಳಿಗಳ ಬಗ್ಗೆ ಮಾಹಿತಿ ನೀಡಿದರು.
Advertisement