
ಮುಂಬೈ: ಮಹಾನಗರ ಟ್ರಾಫಿಕ್ ಭೀತಿ ಹಿನ್ನಲೆಯಲ್ಲಿ ವಿದ್ಯಾರ್ಥಿಯೋರ್ವ ಕಾಲೇಜಿಗೆ ಸರಿಯಾದ ಸಮಯಕ್ಕೆ ಹೋಗಲು ಪ್ಯಾರಾಚೂಟ್ ಬಳಸಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪರೀಕ್ಷೆ ಇದ್ದ ಹಿನ್ನಲೆಯಲ್ಲಿ ಕಾಲೇಜಿಗೆ ಸರಿಯಾದ ಸಮಯಕ್ಕೆ ಹೋಗಲು ವಿದ್ಯಾರ್ಥಿಯೋರ್ವ ಪ್ಯಾರಾಚೂಟ್ ಬಳಸಿ ಸುದ್ದಿಗೆ ಗ್ರಾಸವಾಗಿದ್ದಾನೆ.
ಸತಾರಾ ಜಿಲ್ಲೆಯ ವಾಯ್ ತಾಲ್ಲೂಕಿನ ಪಸರಾನಿ ಗ್ರಾಮದ ವಿದ್ಯಾರ್ಥಿ ಸಮರ್ಥ್ ಮಹಾಂಗಡೆ ಎಂಬಾತ ಪರೀಕ್ಷೆಗೆ ಕೇವಲ 15-20 ನಿಮಿಷಗಳು ಉಳಿದಿರುವಾಗ ಭಾರಿ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುತ್ತೇನೆ ಎಂಬ ಭೀತಿಯಿಂದ ಪ್ಯಾರಾಗ್ಲೈಡಿಂಗ್ ಮೂಲಕ ಕಾಲೇಜಿಗೆ ಆಗಮಿಸಿದ್ದಾನೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊದಲ್ಲಿ ವಿದ್ಯಾರ್ಥಿ ತನ್ನ ಕಾಲೇಜು ಬ್ಯಾಗ್‌ನೊಂದಿಗೆ ಆಕಾಶದಲ್ಲಿ ಹಾರುತ್ತಾ ತನ್ನ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಮಾಡಿದ್ದಾನೆ. ವಿದ್ಯಾರ್ಥಿ ಪ್ಯಾರಾಗ್ಲೈಡಿಂಗ್‌ಗೆ ಅಗತ್ಯವಿರುವ ಎಲ್ಲಾ ಸುರಕ್ಷತಾ ಗೇರ್‌ಗಳನ್ನು ಧರಿಸಿದ್ದನು.
ವರದಿಗಳ ಪ್ರಕಾರ, ಪರೀಕ್ಷೆಯ ದಿನದಂದು ವೈಯಕ್ತಿಕ ಕೆಲಸದ ನಿಮಿತ್ತ ಸಮರ್ಥ್ ಪಂಚಗಣಿಯಲ್ಲಿದ್ದರು. ಪರೀಕ್ಷೆಗೆ ಕೇವಲ 15-20 ನಿಮಿಷಗಳು ಉಳಿದಿರುವಾಗ ಸಮಯಕ್ಕೆ ಸರಿಯಾಗಿ ಕೇಂದ್ರವನ್ನು ತಲುಪಬೇಕು ಎಂದು ವಾಹನದಲ್ಲಿಹೋಗಲು ಸಿದ್ಧತೆ ನಡೆಸಿದ್ದ. ಆದರೆ ಭಾರಿ ಟ್ರಾಫಿಕ್ ಹಿನ್ನಲೆಯಲ್ಲಿ ಇದ್ದಕ್ಕಿದ್ದಂತೆ ಅರಿವಾದಾಗ ಅವರು ಪ್ಯಾರಾಗ್ಲೈಡಿಂಗ್ ಮಾರ್ಗ ಆರಿಸಿಕೊಂಡಿದ್ದಾನೆ. ವಾಯ್-ಪಂಚಗನಿ ರಸ್ತೆಯ ಪಸರಾನಿ ಘಾಟ್ ವಿಭಾಗದಲ್ಲಿ ಭಾರೀ ದಟ್ಟಣೆಯನ್ನು ತಪ್ಪಿಸಲು, ಅವರು ಪರೀಕ್ಷಾ ಕೇಂದ್ರಕ್ಕೆ ಪ್ಯಾರಾಗ್ಲೈಡಿಂಗ್ ಮಾಡಿದ್ದಾರೆ.
ಇದಕ್ಕಾಗಿ ಸಮರ್ಥ್ ಮಹಾಂಗಡೆ ಪಂಚಗಣಿಯಲ್ಲಿರುವ ಜಿಪಿ ಅಡ್ವೆಂಚರ್ಸ್‌ನ ಸಾಹಸ ಕ್ರೀಡಾ ತಜ್ಞ ಗೋವಿಂದ್ ಯೆವಾಲೆ ಎಂಬುವವರ ನೆರವು ಪಡೆದಿದ್ದರು. ಗೋವಿಂದ್ ಯೆವಾಲೆ ತಮ್ಮ ತಂಡದ ಸಹಾಯದಿಂದ ಸಂಚಾರ ದಟ್ಟಣೆಯ ಪ್ರದೇಶದ ಮೇಲೆ ಹಾರಾಟ ವ್ಯವಸ್ಥೆ ಮಾಡಲು ಸಹಾಯ ಮಾಡಿದರು. ಇದು ಅಂತಿಮವಾಗಿ ಸಮರ್ಥ್ ತಮ್ಮ ಕಾಲೇಜಿನ ಬಳಿ ಸಮಯಕ್ಕೆ ಸರಿಯಾಗಿ ಇಳಿಯಲು ಸಹಾಯ ಮಾಡಿತು. ಅನುಭವಿ ಪ್ಯಾರಾಗ್ಲೈಡಿಂಗ್ ಬೋಧಕರ ಮೇಲ್ವಿಚಾರಣೆಯಲ್ಲಿ ಸಮರ್ಥ್ ಸುರಕ್ಷಿತವಾಗಿ ತಮ್ಮ ಪರೀಕ್ಷಾ ಸ್ಥಳವನ್ನು ತಲುಪಿದರು.
ಅಂದಹಾಗೆ ಸತಾರಾ ಪಶ್ಚಿಮ ಮಹಾರಾಷ್ಟ್ರದಲ್ಲಿದ್ದು, ಇದು ಪಾರಾಗ್ಲೈಡಿಂಗ್ ಚಟುವಟಿಕೆಗಳಿಗೆ ಜನಪ್ರಿಯ ಸ್ಥಳಗಳನ್ನು ಹೊಂದಿದೆ. ವೈರಲ್ ವೀಡಿಯೊವನ್ನು 'Insta_satara' ಎಂಬ Instagram ಖಾತೆಯು ಹಂಚಿಕೊಂಡಿದೆ.
Advertisement