ಮಹಾ ಕುಂಭ ಮೇಳಕ್ಕೆ ಮಮತಾ ಬ್ಯಾನರ್ಜಿ ಅಪಮಾನ: ಜನತೆಯಿಂದ ತಕ್ಕ ಉತ್ತರ- ಬಿಜೆಪಿ
ಲಖನೌ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಮಹಾಕುಂಭ ಮೇಳವನ್ನು 'ಮೃತ್ಯುಕುಂಭ' ಎಂದು ಕರೆಯುವ ಮೂಲಕ ಕೋಟ್ಯಂತರ ಹಿಂದೂಗಳಿಗೆ ಅಪಮಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಕಿಡಿಕಾರಿದ್ದಾರೆ.
ಹಿಂದೂಗಳಿಗೆ ಅಗೌರವ ತೋರುವ, ಮಹಾಕುಂಭ ಮತ್ತು ತುಷ್ಟೀಕರಣ ರಾಜಕಾರಣ ಮಾಡುವವರಿಗೆ ಬಿಜೆಪಿ ಹಾಗೂ ರಾಷ್ಟ್ರದ ಜನತೆ ಉತ್ತರ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಮೌರ್ಯ, ಮಮತಾ ಬ್ಯಾನರ್ಜಿ ಅವರ ಹೇಳಿಕೆ ಕೋಟ್ಯಂತರ ಹಿಂದೂಗಳಿಗೆ ಮಾಡಿದ ಅವಮಾನವಾಗಿದೆ. ಇದು ಭಾರತೀಯ ಸಂಸ್ಕೃತಿಯಲ್ಲಿ ನಂಬಿಕೆಯಿರುವವರಿಗೆ ಅಗೌರವವಾಗಿದೆ. ಮಹಾಕುಂಭ ಮೇಳ ಮತ್ತು ಹಿಂದೂಗಳನ್ನು ಅಗೌರವಿಸುವ ಮತ್ತು ಓಲೈಕೆ ಮಾಡುವವರಿಗೆ ಬಿಜೆಪಿ ಮತ್ತು ರಾಷ್ಟ್ರದ ಜನರು ಉತ್ತರ ನೀಡುತ್ತಾರೆ. ಅವರು ಟಿಎಂಸಿಯ ಅಂತ್ಯದ ಬಗ್ಗೆ ಸಂದೇಶವನ್ನು ನೀಡಿದ್ದಾರೆ" ಎಂದು ಹೇಳಿದರು.
ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಪವಿತ್ರ 'ಗಂಗಾ ಸ್ನಾನ ಹಾಗೂ ಮಹಾಕುಂಭದ ಮಹತ್ವ ಕುರಿತು ಮಾತನಾಡುವಾಗ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿನ ಅವ್ಯವಸ್ಥೆಗಾಗಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು,'ಮಹಾ ಕುಂಭವು 'ಮೃತ್ಯು ಕುಂಭ'ವಾಗಿ ಮಾರ್ಪಟ್ಟಿದೆ' ಎಂದು ಟೀಕಿಸಿದ್ದರು.

