
ಹೈದಾರಾಬಾದ್: ಅಪಾರ್ಟ್‌ಮೆಂಟ್ ಸಂಕೀರ್ಣವೊಂದರಲ್ಲಿ ಲಿಫ್ಟ್ ಶಾಫ್ಟ್ ಮತ್ತು ಗೋಡೆಯ ನಡುವೆ ಸಿಲುಕಿ ಆರು ವರ್ಷದ ಬಾಲಕ ಮೃತಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮಸಾಬ್ ಟ್ಯಾಂಕ್ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್ ನಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಲಿಫ್ಟ್ ಬಾಗಿಲು ಮತ್ತು ಗೋಡೆಯ ನಡುವಿನ ಅಂತರಕ್ಕೆ ಜಾರಿಬಿದ್ದಿದ್ದ ಬಾಲಕ ಎರಡು ಗಂಟೆಗಳಿಗೂ ಹೆಚ್ಚು ಕಾಲ ಮೊದಲ ಮಹಡಿಯ ಬಳಿ ಸಿಲುಕಿಕೊಂಡಿದ್ದನು.
ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿ ಸಂರಕ್ಷಣಾ ಸಂಸ್ಥೆ(ಹೈಡ್ರಾ) ಹಾಗೂ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಗ್ಯಾಸ್ ಕಟ್ಟರ್‌ಗಳನ್ನು ಬಳಸಿ ಲಿಫ್ಟ್ ಫ್ರೇಮ್ ಮತ್ತು ನೆಲದ ಸ್ಲ್ಯಾಬ್ ಅನ್ನು ಕತ್ತರಿಸಿ ಬಾಲಕನನ್ನು ರಕ್ಷಿಸಿ, ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದಾಗ್ಯೂ, ಮರಣೋತ್ತರ ಪರೀಕ್ಷೆಯ ನಂತರ ಸಾವಿನ ನಿಖರವಾದ ಕಾರಣವನ್ನು ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಎರಡು ಗಂಟೆಗಳಿಗೂ ಹೆಚ್ಚು ಕಾಲ ಲಿಫ್ಟ್ ಶಾಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಮಗು ಉಸಿರುಗಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬಾಲಕ ತನ್ನ ಅಜ್ಜನೊಂದಿಗೆ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿರುವ ಸಂಬಂಧಿಕರನ್ನು ಭೇಟಿ ಮಾಡಲು ಬಂದಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಲಿಫ್ಟ್ ನ ಗ್ರಿಲ್ ಬಾಗಿಲು ಮುಚ್ಚುವ ಮೊದಲೇ ಲಿಫ್ಟ್ ಮೇಲೆ ಏರಲು ಪ್ರಾರಂಭಿಸಿತು. ಈ ವೇಳೆ ಬಾಲಕ ಹೊರಬರಲು ಪ್ರಯತ್ನಿಸಿದಾಗ ಲಿಫ್ಟ್ ಬಾಗಿಲು ಮತ್ತು ಗೋಡೆಯ ನಡುವೆ ಸಿಲುಕಿಕೊಂಡನು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
Advertisement