
ಲಖನೌ: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಇದುವರೆಗೆ 60 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಶನಿವಾರ ತಿಳಿಸಿದೆ.
ಜನವರಿ 13 ರಂದು ಪ್ರಾರಂಭವಾದ ಕುಂಭಮೇಳಕ್ಕೆ ಫೆಬ್ರವರಿ 26 ರಂದು ಮಹಾ ಶಿವರಾತ್ರಿಯಂದು ತೆರೆ ಬೀಳಲಿದೆ. ಈ ಹಿನ್ನೆಲೆಯಲ್ಲಿ ಪ್ರಯಾಗರಾಜ್ ಗೆ ಭಕ್ತರ ದಂಡೇ ಹರಿದು ಬರುತ್ತಿದೆ. 144 ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳೆ ಕಣ್ತುಂಬಿಕೊಳ್ಳಬೇಕು ಎಂಬುದು ಬಹುತೇಕರ ಆಶಯ.
ಭಾರತದ 110 ಕೋಟಿ ಸನಾತನ ಅನುಯಾಯಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಮತ್ತು ಫೆಬ್ರವರಿ 26 ರಂದು ನಡೆಯುವ ಅಂತಿಮ 'ಅಮೃತ ಸ್ನಾನ'ದ ವೇಳೆಗೆ ಈ ಸಂಖ್ಯೆ 65 ಕೋಟಿಯನ್ನು ಮೀರುವ ನಿರೀಕ್ಷೆಯಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ಮಹಾ ಕುಂಭವು ಯಾವುದೇ ಧಾರ್ಮಿಕ, ಸಾಂಸ್ಕೃತಿಕ ಅಥವಾ ಸಾಮಾಜಿಕ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಜನರ ಭಾಗವಹಿಸುವಿಕೆಯನ್ನು ದಾಖಲಿಸಿದೆ ಎಂದು ಉತ್ತರ ಪ್ರದೇಶ ಹೇಳಿದೆ.
Advertisement