
ಲಖನೌ: ಅಚ್ಚರಿ ಬೆಳವಣಿಗೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.
ಲಖನೌನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, ಮಹಾ ಕುಂಭಮೇಳದಲ್ಲಿ ಕೋಟ್ಯಂತರ ಜನ ಭಾಗವಹಿಸಿದ್ದರು. ಪ್ರಯಾಗ್ ರಾಜ್ ನ ರಸ್ತೆಗಳಲ್ಲಿ ಇನ್ನೂ ಲಕ್ಷಾಂತರ ಮಂದಿ ಭಕ್ತರು ಉಳಿದುಕೊಂಡಿದ್ದು, ಅವರೂ ಕುಂಭಮೇಳದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಮಹಾ ಕುಂಭದ ಅವಧಿಯನ್ನು ವಿಸ್ತರಿಸಬೇಕು ಎಂದು ಹೇಳಿದ್ದಾರೆ.
'ರಸ್ತೆಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಹಿಂದಿನ ವರ್ಷಗಳಲ್ಲಿ, ಮಹಾ ಕುಂಭ ಮತ್ತು ಕುಂಭಮೇಳವು 75 ದಿನಗಳ ಕಾಲ ನಡೆದಿತ್ತು, ಆದರೆ ಪ್ರಸ್ತುತ ವೇಳಾಪಟ್ಟಿಯ ಅನ್ವಯ ಈ ಅವಧಿ ಕಡಿಮೆಯಾಗಿದೆ. ಈಗಲೂ ಸಹ, ಅನೇಕ ಜನರು ಮಹಾ ಕುಂಭಕ್ಕೆ ಹೋಗಲು ಬಯಸುತ್ತಾರೆ ಆದರೆ ಅದು ಸಾಧ್ಯವಾಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸರ್ಕಾರವು ಮಹಾ ಕುಂಭದ ಸಮಯ ಮಿತಿಯನ್ನು ವಿಸ್ತರಿಸಬೇಕು" ಎಂದು ಹೇಳಿದರು.
ಇದೇ ವೇಳೆ ಕಳೆದ ತಿಂಗಳು ಮಹಾ ಕುಂಭದಲ್ಲಿ ನಡೆದ ಕಾಲ್ತುಳಿತದಿಂದ ಉಂಟಾದ ನಿಜವಾದ ಸಾವಿನ ಸಂಖ್ಯೆಯನ್ನು ರಾಜ್ಯ ಸರ್ಕಾರ ಮರೆಮಾಚಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದರು.
ಪ್ರಯಾಗ್ ರಾಜ್ ನತ್ತ ಬರುತ್ತಲೇ ಇದ್ದಾರೆ ಭಕ್ತರು
ಇನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಅನ್ವಯ ಈಗಲೂ ದೇಶಾದ್ಯಂತ ರೈಲುಗಳಲ್ಲಿ ಭಕ್ತರ ದಂಡು ಬರುತ್ತಲೇ ಇದ್ದಾರೆ. ರೈಲುಗಳಲ್ಲಿ ನಿಲ್ಲಲೂ ಜಾಗವಿಲ್ಲದಷ್ಟು ಜನ ಕಿಕ್ಕಿರಿದು ತುಂಬಿದ್ದಾರೆ. ಮಹಾಕುಂಭಮೇಳದ ಅಂತಿಮ ಹಂತದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಲು ಮುಗಿಬಿದ್ದಿದ್ದಾರೆ.
ರೈಲುಗಳು, ದಟ್ಟಣೆಯ ರಸ್ತೆಗಳು ಮತ್ತು ಮಹಾ ಕುಂಭಕ್ಕೆ ಹೋಗುವ ಬೃಹತ್ ಜನಸಂದಣಿಯನ್ನು ವಿಡಿಯೋಗಳು ತೋರಿಸುತ್ತವೆ. ಈ ವಾರದ ಆರಂಭದಲ್ಲಿ, ಮಹಾ ಕುಂಭಮೇಳಕ್ಕೆ ಹೋಗುವ ರಸ್ತೆಗಳು ಕಿಲೋಮೀಟರ್‌ಗಳಷ್ಟು ವಿಸ್ತರಿಸಿರುವ ತೀವ್ರ ಸಂಚಾರ ದಟ್ಟಣೆಯನ್ನು ಕಂಡಿದ್ದವು. ಅಗಾಧ ಜನದಟ್ಟಣೆಯಿಂದಾಗಿ ಪ್ರಯಾಗ್‌ರಾಜ್ ಸಂಗಮ್ ರೈಲು ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಬೇಕಾಯಿತು.
ಅಂದಹಾಗೆ ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಸಭೆಯಾಗಿರುವ ಮಹಾ ಕುಂಭ ಮೇಳವು ಜನವರಿ 13 ರಂದು ಪ್ರಾರಂಭವಾಗಿತ್ತು. ಇದು ಫೆಬ್ರವರಿ 26 ರಂದು ಮಹಾ ಶಿವರಾತ್ರಿಯಂದು ಮುಕ್ತಾಯಗೊಳ್ಳಲಿದೆ. ರಾಜ್ಯ ಸರ್ಕಾರದ ಅಂಕಿಅಂಶಗಳ ಪ್ರಕಾರ, ಶುಕ್ರವಾರ ಸಂಜೆಯವರೆಗೆ 50 ಕೋಟಿಗೂ ಹೆಚ್ಚು ಜನರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಇದು ರಷ್ಯಾ ಮತ್ತು ಅಮೆರಿಕ ದೇಶಗಳ ಒಟ್ಟು ಜನಸಂಖ್ಯೆಗಿಂತ ಹೆಚ್ಚಾಗಿದೆ.
ಇದಲ್ಲದೇ ಶುಕ್ರವಾರ ಸಂಜೆ 6 ಗಂಟೆಯವರೆಗೆ 92 ಲಕ್ಷಕ್ಕೂ ಹೆಚ್ಚು ಜನರು ಸ್ನಾನ ಮಾಡಿದ್ದಾರೆ, ಇದರಿಂದಾಗಿ ಮಹಾ ಕುಂಭದಲ್ಲಿ ಒಟ್ಟು 50 ಕೋಟಿ (ಫೆಬ್ರವರಿ 14 ರವರೆಗೆ) ಜನರು ಭಾಗವಹಿಸಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
Advertisement