
ಅಮರಾವತಿ: ಕುಡಿತದ ಚಟಕ್ಕೆ ದಾಸನಾಗಿರುವ ಯುವಕನೋರ್ವ ತನ್ನ ತಾಯಿ ಮದ್ಯಪಾನಕ್ಕೆ ಹಣ ನೀಡಲಿಲ್ಲ ಎಂದು ಮನೆ ಬಳಿ ಇದ್ದ ಹೈ ಟೆನ್ಷನ್ ವೈರ್ ಮೇಲೆ ಮಲಗಿರುವ ಅಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೌದು.. ಕುಡಿದವರು ವಿಚಿತ್ರವಾಗಿ ವರ್ತಿಸುತ್ತಾರೆ.. ಕುಡಿತದ ಮತ್ತಿನಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ತಿಳಿಯದೇ ವರ್ತಿಸುತ್ತಾರೆ. ಅವರ ವರ್ತನೆ ಕೆಲವೊಮ್ಮೆ ನಗು ತರಿಸುತ್ತದೆಯಾದರೂ ಇನ್ನೂ ಕೆಲವೊಮ್ಮೆ ಆಕ್ರೋಶ ಮತ್ತು ಭಯವನ್ನೂ ತರಿಸುತ್ತದೆ. ಇಂತಹುದೇ ಒಂದು ಘಟನೆ ಆಂಧ್ರ ಪ್ರದೇಶದಲ್ಲಿ ವರದಿಯಾಗಿದ್ದು, ಆಂಧ್ರ ಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಎಂ ಸಿಂಗಾಪುರಂ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕುಡಿದ ಮತ್ತಿನ್ನಲ್ಲಿದ್ದ ಯುವಕ ಮತ್ತೆ ಕುಡಿಯಲು ಹಣ ಬೇಕು ಎಂದು ಹಠ ಮಾಡಿ ವಿದ್ಯುತ್ ಕಂಬವನ್ನೇರಿ ಮಲಗಿದ್ದಾನೆ. ಆ ಮೂಲಕ ಯುವಕ ಮದ್ಯದ ಅಮಲಿನಲ್ಲಿ ಮಾಡಿದ ಕೃತ್ಯ ಇಡೀ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.
ಪಾಲಕೊಂಡ ಮಂಡಲ ಎಂ ಸಿಂಗಾಪುರದ ನಿವಾಸಿ ಯುವಕ ಕುಡಿತದ ದಾಸವಾಗಿದ್ದು, ನಿತ್ಯ ಕುಡಿತಕ್ಕಾಗಿ ಮನೆಯಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಜಗಳ ಮಾಡುತ್ತಿದ್ದ. ನಿನ್ನೆ ಮನೆಗೆ ಬಂದ ಯುವಕ ಯಜ್ಜಲ ವೆಂಕಣ್ಣ ತನ್ನ ತಾಯಿ ಬಳಿ ಕುಡಿತಕ್ಕೆ ಹಣ ಕೇಳಿದ್ದು ಆಗ ತಾಯಿ ನನ್ನಬಳಿ ಹಣವಿಲ್ಲ ಎಂದು ಹೇಳಿದ್ದಾರೆ.
ಆದರೆ ಯುವಕ ನನಗೆ ಕೂಡಲೇ ಹಣ ಬೇಕು. ನಿನ್ನ ಪಿಂಚಣಿ ಹಣ ನೀಡು ಎಂದು ಪಟ್ಟು ವೆಂಕಣ್ಣ ಗಲಾಟೆ ಮಾಡಿದ್ದಾನೆ. ಈ ವೇಳೆ ಆಕೆ ಹಣ ನೀಡದೇ ಇದ್ದಾಗ ವಿದ್ಯುತ್ ಕಂಬ ಏರುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೆ ನೋಡ ನೋಡುತ್ತಲೇ ವಿದ್ಯುತ್ ಕಂಬವನ್ನೇರಲು ಆರಂಭಿಸಿದ್ದಾನೆ. ಇದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಗ್ರಾಮದ ಟ್ರಾನ್ಸ್ ಫಾರ್ಮರ್ ಬಳಿ ಹೋಗಿ ವಿದ್ಯುತ್ ಸರಬರಾಜು ನಿಲ್ಲಿಸಿದ್ದಾರೆ.
ಅಷ್ಟು ಹೊತ್ತಿಗಾಗಲೇ ಯುವಕ ವಿದ್ಯುತ್ ಕಂಬ ಏರಿ, ಹೈಟೆನ್ಷನ್ ವೈರ್ ಮೇಲೆ ಮಲಗಿದ್ದಾನೆ. ಅದೃಷ್ಟವಶಾತ್ ವಿದ್ಯುತ್ ಸರಬರಾಜನ್ನು ಗ್ರಾಮಸ್ಥರು ಸ್ಥಗಿತಗೊಳಿಸಿದ್ದರಿಂದ ಯುವಕ ವಿದ್ಯುತ್ ಆಘಾತದಿಂದ ಪಾರಾಗಿದ್ದಾನೆ,
ಮಲಗಿದ್ದಷ್ಟೇ ಅಲ್ಲದೆ, ಅರ್ಧ ಗಂಟೆಗೂ ಹೆಚ್ಚು ಕಾಲ ವೆಂಕಣ್ಣ ವಿದ್ಯುತ್ ತಂತಿಗಳ ಮೇಲೆ ಓಡಾಡಿ ಹುಚ್ಚು ಸಾಹಸ ಮೆರೆದಿದ್ದಾನೆ. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕೆಳಗಿಳಿಯುವಂತೆ ಮನವಿ ಮಾಡಿದರೂ ಬಹಳ ಹೊತ್ತಾದರೂ ಕೆಳಗೆ ಬರಲಿಲ್ಲ. ಕೊನೆಗೆ ಗ್ರಾಮಸ್ಥರು ಮದ್ಯ ಸೇವಿಸಲು ಹಣ ನೀಡುವುದಾಗಿ ಹೇಳಿ ಕೆಳಗಿಳಿಸಿದ್ದಾರೆ. ಇವಿಷ್ಟೂ ದೃಶ್ಯವನ್ನು ಗ್ರಾಮಸ್ಥರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.
Advertisement