
ನವದೆಹಲಿ: ಸುಭಾಷ್ ಅತುಲ್ ಕೌಟುಂಬಿಕ ಕಲಹ ವಿವಾದ ಹಸಿರಾಗಿರುವಂತೆಯೇ ಅತ್ತ ರಾಜಧಾನಿ ದೆಹಲಿಯಲ್ಲಿ ಅಂತಹುದೇ ಮತ್ತೊಂದು ಆತ್ಮಹತ್ಯೆ ಪ್ರಕರಣ ವರದಿಯಾಗಿದೆ.
ದೆಹಲಿಯ ಪ್ರಸಿದ್ಧ ಕೆಫೆಯೊಂದರ ಸಹ-ಸಂಸ್ಥಾಪಕ 40 ವರ್ಷದ ಪುನೀತ್ ಖುರಾನಾ ಎಂಬುವವರು ಇಲ್ಲಿನ ಮಾಡೆಲ್ ಟೌನ್‌ನ ಕಲ್ಯಾಣ್ ವಿಹಾರ್ ಪ್ರದೇಶದ ತಮ್ಮ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆಯಿಂದ ಸಂಭವಿಸಿದ ಸಾವು ಎಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಪುನೀತ್ ಖುರಾನಾ ಮತ್ತು ಅವರ ಪತ್ನಿ ಮಾಣಿಕಾ ಜಗದೀಶ್ ಪಹ್ವಾ ವಿಚ್ಛೇದನ ಪಡೆಯುವ ಹಂತದಲ್ಲಿದ್ದರು. ಈ ಜೋಡಿ ದೆಹಲಿಯಲ್ಲಿ ವುಡ್‌ಬಾಕ್ಸ್ ಕೆಫೆ ನಡೆಸುತ್ತಿದ್ದರು. ಇಬ್ಬರ ನಡುವೆ ವ್ಯವಹಾರದ ಬಗ್ಗೆ ವಿವಾದವಿತ್ತು. ಇದೇ ವಿಚಾರವಾಗಿ ಇಬ್ಬರೂ ಆಗಾಗ ಜಗಳ ಮಾಡಿಕೊಳ್ಳುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖುರಾನಾ ಅವರ ಕುಟುಂಬದ ಪ್ರಕಾರ, ಪುನೀತ್ ಅವರು ತಮ್ಮ ಪತ್ನಿಯೊಂದಿಗೆ 'ಅಸಮಾಧಾನಗೊಂಡಿದ್ದರು'. ಇಬ್ಬರೂ 2016 ರಲ್ಲಿ ವಿವಾಹವಾಗಿದ್ದರು. ವ್ಯವಹಾರದ ಹಣದ ವಹಿವಾಟು ವಿಚಾರವಾಗಿ ಇಬ್ಬರೂ ಗಲಾಟೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ಅಂತೆಯೇ ಈ ಜೋಡಿಯ ಸುಮಾರು 16 ನಿಮಿಷಗಳ ಆಡಿಯೋ ಕೂಡ ಬಿಡುಗಡೆಯಾಗಿದ್ದು, ಆಡಿಯೋದಲ್ಲಿ 'ಖುರಾನಾ ಮತ್ತು ಅವರ ಪತ್ನಿ ವ್ಯವಹಾರ ಆಸ್ತಿಗಾಗಿ ಜಗಳವಾಡುತ್ತಿರುವುದು ಕೇಳಿಸುತ್ತದೆ. "ನಾವು ವಿಚ್ಛೇದನ ಪಡೆಯುತ್ತಿದ್ದೇವೆ ನಿಜ.. ಆದರೆ ನಾನು ಇನ್ನೂ ವ್ಯವಹಾರ ಪಾಲುದಾರನಾಗಿದ್ದೇನೆ... ನೀವು ನನ್ನ ಬಾಕಿ ಹಣವನ್ನು ಪಾವತಿಸಬೇಕು" ಎಂದು ಖುರಾನ ಅವರ ಪತ್ನಿಗೆ ಹೇಳುತ್ತಿರುವುದು ದಾಖಲಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಪ್ರಸ್ತುತ ಪೊಲೀಸರು ಖುರಾನ ಅವರ ಫೋನ್ ಅನ್ನು ವಶಪಡಿಸಿಕೊಂಡಿದ್ದು, ಅವರ ಪತ್ನಿಯನ್ನು ವಿಚಾರಣೆಗೆ ಕರೆದಿದ್ದಾರೆ. ಇತ್ತೀಚಿನ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಅವರ ಆತ್ಮಹತ್ಯೆ ಪ್ರಕರಣದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ.
Advertisement