
ನವದೆಹಲಿ: ಭಾರತ ಯಾವಾಗಲೂ ಮಾಲ್ಡೀವ್ಸ್‌ಗೆ ಬೆಂಬಲ ನೀಡುತ್ತಾ ಬಂದಿದ್ದು, ಮುಂದೆಯೂ ಕೂಡ ನಿರಂತರ ಬೆಂಬಲದ ಭರವಸೆ ನೀಡುತ್ತದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ದ್ವೀಪರಾಷ್ಟ್ರ ಮಾಲ್ಡೀವ್ಸ್ ನ ವಿದೇಶಾಂಗ ಸಚಿವ ಅಬ್ದುಲ್ಲಾ ಖಲೀಲ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಿದ ಎಸ್ ಜೈಶಂಕರ್, 'ಭಾರತ ಯಾವಾಗಲೂ ಮಾಲ್ಡೀವ್ಸ್‌ಗೆ ಬೆಂಬಲ ನೀಡುತ್ತಾ ಬಂದಿದ್ದು, ಮುಂದೆಯೂ ಕೂಡ ನಿರಂತರ ಬೆಂಬಲದ ಭರವಸೆ ನೀಡುತ್ತದೆ. ಭಾರತ ಮತ್ತು ಮಾಲ್ಡೀವ್ಸ್ ಗಡಿಯಾಚೆಗಿನ ವ್ಯಾಪಾರಕ್ಕಾಗಿ ಸ್ಥಳೀಯ ಕರೆನ್ಸಿಗಳ ಬಳಕೆಯನ್ನು ಉತ್ತೇಜಿಸಲು ಒಂದು ಚೌಕಟ್ಟನ್ನು ಅಂತಿಮಗೊಳಿಸಿವೆ. ಈ ಮಹತ್ವದ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ ಎಂದರು.
ಅಂತೆಯೇ 'ನಾವು ವಿವಿಧ ಕ್ಷೇತ್ರಗಳಲ್ಲಿ ನಮ್ಮ ಸಂಬಂಧ-ವ್ಯವಹಾರವನ್ನು ಹೆಚ್ಚಿಸಿದ್ದೇವೆ. ಅಂತೆಯೆ ಮಾಲ್ಡೀವ್ಸ್ ಗೆ ನಮ್ಮ ನೆರೆಹೊರೆಯವರು ಮೊದಲು ನೀತಿಯ ಅತ್ಯಂತ ಪ್ರಮುಖ ಸ್ಥಾನಮಾನ ನೀಡಲಾಗಿದೆ. ಮಾಲ್ಡೀವ್ಸ್ ಜೊತೆಗಿನ ದ್ವಿಪಕ್ಷೀಯ ಸಂಬಂಧಗಳಿಗೆ ಭಾರತ ಪ್ರಾಮುಖ್ಯತೆ ನೀಡುತ್ತಾ ಬಂದಿದೆ. ಭಾರತದ 'ನೆರೆಹೊರೆ ಮೊದಲು' ನೀತಿ ಮತ್ತು 'ಸಾಗರ ಪ್ರದೇಶದಲ್ಲಿ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ ಎಂಬ ದೃಷ್ಟಿಕೋನದಡಿಯಲ್ಲಿ ಮಾಲ್ಡೀವ್ಸ್‌ಗೆ ನಿರಂತರ ಬೆಂಬಲ ನೀಡುತ್ತೇವೆ ಎಂದು ಜೈಶಂಕರ್ ಹೇಳಿದರು.
ಇನ್ನು 2024ರ ಅಕ್ಟೋಬರ್‌ನಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಭಾರತ ಭೇಟಿಯ ನಂತರ ಖಲೀಲ್ ಅವರ ಭೇಟಿ ನಡೆದಿದೆ. ಜೈಶಂಕರ್ ಮತ್ತು ವಿದೇಶಾಂಗ ಸಚಿವ ಖಲೀಲ್ ಅವರು ಮುಯಿಝು ಅವರ ಭಾರತ ಭೇಟಿಯ ಸಮಯದಲ್ಲಿ ತೆಗೆದುಕೊಳ್ಳಲಾದ ನಿರ್ಣಯಗಳು ಮತ್ತು ಒಪ್ಪಂದಗಳ ಕುರಿತು ಆಗಿರುವ ಪ್ರಗತಿಯನ್ನು ಪರಿಶೀಲಿಸಿದರು.
"ಅಗತ್ಯದ ಸಮಯದಲ್ಲಿ ಭಾರತವು ಮಾಲ್ಡೀವ್ಸ್‌ಗೆ ನೀಡಿದ ಸಕಾಲಿಕ ತುರ್ತು ಆರ್ಥಿಕ ಸಹಾಯವನ್ನು" ಶ್ಲಾಘನೀಯ. ಇದು ಮಾಲ್ಡೀವ್ಸ್‌ನ "ಮೊದಲ ಪ್ರತಿಕ್ರಿಯೆ ನೀಡುವವ"ನಾಗಿ ಭಾರತದ ಪಾತ್ರವನ್ನು ಪ್ರತಿಬಿಂಬಿಸುತ್ತದೆ.
ಭಾರತ-ಮಾಲ್ಡೀವ್ಸ್ ಸಮಗ್ರ ಆರ್ಥಿಕ ಮತ್ತು ಕಡಲ ಭದ್ರತಾ ಪಾಲುದಾರಿಕೆಗಾಗಿ ಜಂಟಿ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಭಾರತ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಲು ಅಧ್ಯಕ್ಷ ಡಾ. ಮುಯಿಝು ಮತ್ತು ಮಾಲ್ಡೀವ್ಸ್ ಸರ್ಕಾರದ ದೃಢ ಬದ್ಧತೆಯನ್ನು ಮಾಲ್ಡೀವ್ಸ್ ಪ್ರದರ್ಶಿಸುತ್ತದೆ ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಖಲೀಲ್ ಹೇಳಿದ್ದಾರೆ ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.
ಅಂತೆಯೇ ಭಾರತ ಸರ್ಕಾರದಿಂದ ಅನುದಾನದ ಮೂಲಕ ಹೆಚ್ಚಿನ ಪರಿಣಾಮ ಬೀರುವ ಸಮುದಾಯ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕಾಗಿ ಎರಡೂ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿವೆ ಎನ್ನಲಾಗಿದೆ.
Advertisement