Assam Mine Tragedy: ಗಣಿಯಲ್ಲಿ ಇನ್ನೂ 9 ಕಾರ್ಮಿಕರು ಸಿಲುಕಿದ್ದು ನೌಕಾಪಡೆಯ ಮುಳುಗು ತಜ್ಞರಿಂದ ರಕ್ಷಣಾ ಕಾರ್ಯಾಚರಣೆ!
ಗುವಾಹತಿ: ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ದುರಂತದಲ್ಲಿ ಈವರೆಗೂ 3 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಇನ್ನೂ ಒಂಬತ್ತು ಕಾರ್ಮಿಕರು ಸಿಲುಕಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಜೊತೆ ಸೇರಿ ನೌಕಾಪಡೆಯ ಮುಳುಗು ತಜ್ಞರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಸೋಮವಾರ ರಾತ್ರಿಯೇ ಸಿಕ್ಕಿಬಿದ್ದಿರುವ ಗಣಿಗಾರರ ಹೆಸರುಗಳನ್ನೂ ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿದ್ದು, ಸಂತ್ರಸ್ಥ ಕಾರ್ಮಿಕರನ್ನು ನೇಪಾಳದ ಗಂಗಾ ಬಹದ್ದೂರ್ ಶ್ರೇತ್ (38), ಪಶ್ಚಿಮ ಬಂಗಾಳದ ಸಂಜಿತ್ ಸರ್ಕಾರ್ (35), ಅಸ್ಸಾಂನ ಹುಸೇನ್ ಅಲಿ (30), ಜಾಕಿರ್ ಹುಸೇನ್ (38), ಸರ್ಪಾ ಬರ್ಮನ್ (46), ಮುಸ್ತಫಾ ಸೇಖ್ (44), ಖುಸಿ ಮೋಹನ್ ರೈ (57), ಲಿಜನ್ ಮಗರ್ (26) ಮತ್ತು ಶರತ್ ಗೊಯಾರಿ (37) ಎಂದು ಗುರುತಿಸಲಾಗಿದೆ.
ಇನ್ನು ಕಲ್ಲಿದ್ದಲು ಗಣಿಯಲ್ಲಿ ಸಿಲುಕಿರುವವರ ರಕ್ಷಣೆಗೆ ಇದೇ ನೌಕಾಪಡೆ ಧುಮುಕಿದ್ದು, 'ಸಿಕ್ಕಿಬಿದ್ದಿರುವ ಗಣಿಗಾರರನ್ನು ರಕ್ಷಿಸುವಲ್ಲಿ ನಾಗರಿಕ ಆಡಳಿತಕ್ಕೆ ಸಹಾಯ ಮಾಡಲು ನೌಕಾಪಡೆಯೂ ಉಮ್ರಾಂಗ್ಸೊ ತಲುಪಿವೆ ಎಂದು ಗುವಾಹಟಿ ಮೂಲದ ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮಹೇಂದರ್ ರಾವತ್ ಹೇಳಿದ್ದಾರೆ.
ಇದೇ ವೇಳೆ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ನೌಕಾಪಡೆಯ ಮುಳುಗು ತಜ್ಞರು ನಿರತರಾಗಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. "ಸ್ಥಳೀಯ ತಂಡದ ಮೌಲ್ಯಮಾಪನದ ಪ್ರಕಾರ ಗಣಿ ಒಳಗೆ ನೀರಿನ ಮಟ್ಟವು ಸುಮಾರು 100 ಅಡಿಗಳಿಗೆ ಏರಿದೆ. ಹೀಗಾಗಿ ವಿಶಾಖಪಟ್ಟಣಂ ಮುಳುಗು ತಜ್ಞರಿಗೆ ಬುಲಾವ್ ನೀಡಲಾಗಿತ್ತು. ಮುಳುಗು ತಜ್ಞರು ತಮ್ಮ ಜೊತೆ ರಕ್ಷಣಾ ಪರಿಕರಗಳನ್ನು ತಂದಿದ್ದಾರೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಕಲ್ಲಿದ್ದಲು ಗಣಿ ದುರಂತಗಳು ಈಶಾನ್ಯ ಭಾರತದಲ್ಲಿ ಸಾಮಾನ್ಯವಾಗಿದ್ದು, ಈ ಹಿಂದೆ ಜನವರಿ 2024ರಲ್ಲಿ, ನಾಗಾಲ್ಯಾಂಡ್‌ನ ವೋಖಾ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಬೆಂಕಿಯಲ್ಲಿ ಆರು ಕಾರ್ಮಿಕರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿದ್ದರು. ಅಂತೆಯೇ ಮೇ ತಿಂಗಳಲ್ಲಿ, ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ ಗಣಿ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದರು.
ನಂತರ ಸೆಪ್ಟೆಂಬರ್ 2022 ರಲ್ಲಿ, ಅದೇ ಜಿಲ್ಲೆಯಲ್ಲಿ ಶಂಕಿತ ವಿಷಕಾರಿ ಅನಿಲ ಸೋರಿಕೆಯಾಗಿ ಮೂವರು ಕಲ್ಲಿದ್ದಲು ಗಣಿಗಾರರು ಕೊಲ್ಲಲ್ಪಟ್ಟರು. ಡಿಸೆಂಬರ್ 13, 2018 ರಂದು ಮೇಘಾಲಯದ ಕ್ಸಾನ್ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿದ ಇಲಿ-ಹೋಲ್ ಕಲ್ಲಿದ್ದಲು ಗಣಿಯಲ್ಲಿ 15 ಕಾರ್ಮಿಕರು ಸಾವನ್ನಪ್ಪಿದ್ಜರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ