
ನವದೆಹಲಿ: ದೇಶಾದ್ಯಂತ ಈಗ ವಾರಕ್ಕೆ ಎಷ್ಟು ಗಂಟೆ ಕೆಲಸ ಮಾಡಬೇಕೆಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ವಾರಕ್ಕೆ 70 ಗಂಟೆ ಕೆಲಸದ ಬಗ್ಗೆ ಮಾತನಾಡಿದ್ದ ಬೆನ್ನಲ್ಲೆ 70 ಅಲ್ಲ 90 ಗಂಟೆ ಕೆಲಸ ಮಾಡಬೇಕು ಭಾನುವಾರಗಳಂದೂ ಕೆಲಸ ಮಾಡಬೇಕೆಂದು L&T ಅಧ್ಯಕ್ಷ ಎಸ್ ಎನ್ ಸುಬ್ರಹ್ಮಣ್ಯನ್ ಹೇಳಿದ್ದರು.
ಈಗ ಎಲ್&ಟಿ ಅಧ್ಯಕ್ಷರ ಅಭಿಪ್ರಾಯದ ಬಗ್ಗೆ RPG ಸಮೂಹಗಳ ಅಧ್ಯಕ್ಷ ಹರ್ಷ್ ಗೋಯೆಂಕಾ ಕಳವಳ ವ್ಯಕ್ತಪಡಿಸಿದ್ದಾರೆ. ವಾರಕ್ಕೆ 90 ಗಂಟೆಗಳ ಕೆಲಸದ ಪರಿಕಲ್ಪನೆ ಸೂಕ್ತವಲ್ಲ ಎಂದು ಹೇಳಿರುವ ಗೋಯೆಂಕಾ, ವಾರಕ್ಕೆ 90 ಗಂಟೆಗಳು? ಅದರ ಬದಲು Sunday ಗಳನ್ನು ‘Sun-duty’ ಎಂದೇಕೆ ಮರುನಾಮಕರಣ ಮಾಡಬಾರದು? ರಜೆ ದಿನಗಳನ್ನು ಪೌರಾಣಿಕ ಪರಿಕಲ್ಪನೆಯನ್ನಾಗಿ ಮಾಡಿಬಿಡಿ, ಶ್ರಮವಹಿಸಿ, ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಎನ್ನುವುದು ನನ್ನ ನಂಬಿಕೆ. ಆದರೆ ಜೀವನವನ್ನು ಶಾಶ್ವತ ಕಚೇರಿಯನ್ನಾಗಿ ಬದಲಾವಣೆ ಮಾಡುವುದೆಂದರೆ ಅದು ಬಳಲಿಕೆಗೆ ದಾರಿಯಾಗುತ್ತದೆಯಷ್ಟೇ ಹೊರತು ಯಶಸ್ಸಿಗಲ್ಲ ಎಂದು ಗೋಯೆಂಕಾ ಹೇಳಿದ್ದಾರೆ.
ಕೆಲಸ-ಜೀವನದ ಸಮತೋಲನ ಆಯ್ಕೆಯಲ್ಲ, ಅದು ಅತ್ಯಗತ್ಯ. ಇದು ನನ್ನ ಅಭಿಪ್ರಾಯವಷ್ಟೇ. ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಗುಲಾಮಿತನದಿಂದ ಅಲ್ಲ ಎಂದು ಗೋಯೆಂಕಾ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಇತ್ತೀಚೆಗೆ ನೌಕರರೊಂದಿಗಿನ ಸಭೆಯಲ್ಲಿ ಸುಬ್ರಹ್ಮಣ್ಯನ್ ವಾರಕ್ಕೆ 90 ಗಂಟೆಗಳ ಕಾಲ ನೌಕರರು ಕೆಲಸ ಮಾಡಬೇಕೆಂದು ಹೇಳಿದ್ದರು. ನೌಕರರು ಭಾನುವಾರದ ರಜೆಗಳನ್ನು ತ್ಯಜಿಸಬೇಕು ಎಂದು ಹರ್ಷ್ ಗೋಯೆಂಕಾ ಹೇಳಿದ್ದರು.
"ಭಾನುವಾರಗಳಂದು ನಿಮ್ಮಿಂದ ಕೆಲಸ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ನಾನು ವಿಷಾದಿಸುತ್ತೇನೆ. ಭಾನುವಾರಗಳಂದು ನಾನು ನಿಮ್ಮನ್ನು ಕೆಲಸ ಮಾಡಲು ಬಿಟ್ಟರೆ, ನಾನು ಹೆಚ್ಚು ಸಂತೋಷಪಡುತ್ತೇನೆ, ಏಕೆಂದರೆ ನಾನು ಭಾನುವಾರ ಕೆಲಸ ಮಾಡುತ್ತೇನೆ. ನೀವು ನಿಮ್ಮ ಹೆಂಡತಿಯನ್ನು ಎಷ್ಟು ಹೊತ್ತು ನೋಡಬಹುದು?" ಎಂದು ಸುಬ್ರಹ್ಮಣ್ಯನ್ ರೆಡ್ಡಿಟ್‌ನಲ್ಲಿ ಪ್ರಸಾರವಾಗಿರುವ ವೀಡಿಯೊದಲ್ಲಿ ಹೇಳಿದ್ದಾರೆ.
Advertisement