
ಲಖನೌ: ಉತ್ತರ ಪ್ರದೇಶದ ಕನ್ನೌಜ್‌ನ ರೈಲು ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ 2:30 ರ ಸುಮಾರಿಗೆ ನಿರ್ಮಾಣ ಹಂತದ ಛಾವಣಿ ಕುಸಿದಿದ್ದು, ಅವಶೇಷಗಳ ಅಡಿಯಲ್ಲಿ ಕನಿಷ್ಠ 20 ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಜಿಲ್ಲಾ ಅಧಿಕಾರಿಗಳ ಪ್ರಕಾರ, 15 ಕಾರ್ಮಿಕರನ್ನು ರಕ್ಷಿಸಲಾಗಿದೆ, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ನಿಲ್ದಾಣದಲ್ಲಿ ಸೌಂದರ್ಯೀಕರಣ ಕಾರ್ಯದ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಅವಘಡ ನಡೆದ ಸಮಯದಲ್ಲಿ ಸುಮಾರು 30–35 ಕಾರ್ಮಿಕರು ಸ್ಥಳದಲ್ಲಿ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದರು. ರಕ್ಷಿಸಲ್ಪಟ್ಟ ಎಲ್ಲರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳದಲ್ಲಿ ಹಾಜರಿದ್ದ ಉತ್ತರ ಪ್ರದೇಶದ ಸಮಾಜ ಕಲ್ಯಾಣ ಸಚಿವ ಮತ್ತು ಕನ್ನೌಜ್(ಸದರ್) ಕ್ಷೇತ್ರದ ಬಿಜೆಪಿ ಶಾಸಕ ಅಸೀಮ್ ಅರುಣ್, ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಎಲ್ಲರನ್ನು ರಕ್ಷಿಸುವುದು ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.
ಏತನ್ಮಧ್ಯೆ, ಮಧ್ಯಾಹ್ನ 2:39 ಕ್ಕೆ ಕನ್ನೌಜ್ ರೈಲ್ವೆ ನಿಲ್ದಾಣದಲ್ಲಿ ಶಟರ್ ಕುಸಿದು ಐದು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
Advertisement