
ನವದೆಹಲಿ: ದೆಹಲಿ ಮುಖ್ಯಮಂತ್ರಿ ಮತ್ತು AAP ಅಭ್ಯರ್ಥಿಯಾಗಿರುವ ಅತಿಶಿ ಚುನಾವಣಾ ವೆಚ್ಚಕ್ಕಾಗಿ ಕ್ರೌಡ್ ಫಂಡಿಂಗ್ ಅಭಿಯಾನ ಆರಂಭಿಸಿದ ಕೇವಲ 6 ಗಂಟೆಗಳಲ್ಲಿ ಅವರ ಆನ್ ಲೈನ್ ಪೋರ್ಟಲ್ ಮೂಲಕ ರೂ. 15 ಲಕ್ಷಕ್ಕೂ ಹೆಚ್ಚಿನ ಹಣವನ್ನು ಸಂಗ್ರಹಿಸಿದ್ದಾರೆ.
ಕಾಲ್ಕಾಜಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಅತಿಶಿ ಚುನಾವಣಾ ವೆಚ್ಚಕ್ಕಾಗಿ ರೂ. 40 ಲಕ್ಷ ಸಂಗ್ರಹಿಸುವ ಗುರಿ ಹೊಂದಿದ್ದಾರೆ. ಪಕ್ಷದ ದೇಣಿಗೆ ಪೇಜ್ ನಲ್ಲಿ ತೋರಿಸಿದಂತೆ 278 ಜನರು ಒಟ್ಟಾರೇ ರೂ. 15,15,930 ದೇಣಿಗೆಯನ್ನು ಅತಿಶಿಗೆ ನೀಡಿದ್ದಾರೆ.
ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅತಿಶಿ, ಆಮ್ ಆದ್ಮಿ ಪಕ್ಷದ ಪ್ರಾಮಾಣಿಕ ರಾಜಕೀಯವನ್ನು ಬೆಂಬಲಿಸಿ ಜನ ಹಣ ದಾನ ಮಾಡುತ್ತಿದ್ದಾರೆ. ನಾವು ಚುನಾವಣಾ ವೆಚ್ಚಕ್ಕಾಗಿ ದೊಡ್ಡ ಉದ್ಯಮಿಗಳಿಂದ ದೇಣಿಗೆ ಪಡೆಯುವುದಿಲ್ಲ. ಎಎಪಿ ಸರ್ಕಾರ ಸಾಮಾನ್ಯ ಜನರಿಗಾಗಿ ಕೆಲಸ ಮಾಡುತ್ತದೆ. ಕಾಲ್ಕಾಜಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ನಾನು ಚುನಾವಣಾ ವೆಚ್ಚಗಳಿಗಾಗಿ 40 ಲಕ್ಷ ರೂ.ಗಳ ಕ್ರೌಡ್ ಫಂಡಿಂಗ್ ಅಭಿಯಾನ ಆರಂಭಿಸಿದ್ದೇನೆ. ಚುನಾವಣೆಗಾಗಿ ಈ ಅಭಿಯಾನ ನಡೆಸುವುದು ನನಗೆ ಅಗತ್ಯವಾಗಿದೆ. ಜನರು ತಮ್ಮ ಕೈಲಾದಷ್ಟನ್ನು ದಾನ ಮಾಡಬಹುದು ಎಂದು ತಿಳಿಸಿದರು.
ಜನರಿಂದ ಪಡೆದ ಸಣ್ಣ ದೇಣಿಗೆಯೊಂದಿಗೆ ಈ ಹಿಂದಿನ ಚುನಾವಣೆಗಳಲ್ಲಿ AAP ಹೇಗೆ ಗೆಲುವು ಸಾಧಿಸಿತು ಎಂಬುದನ್ನು ನೆನಪಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಭಿಯಾನ ಆರಂಭಿಸಿರುವ ಅತಿಶಿ, ಜನರ ಬೆಂಬಲದಿಂದ ಯುವ, ಸುಶಿಕ್ಷಿತ ಮಹಿಳೆಯೊಬ್ಬರು ಹೇಗೆ ರಾಜಕೀಯ ಬದುಕನ್ನು ರೂಪಿಸಿಕೊಳ್ಳಬೇಕು ಎಂಬುದನ್ನು ಉಲ್ಲೇಖಿಸಿದ್ದಾರೆ. ಈಗ ಮತ್ತೊಂದು ಚುನಾವಣೆಯನ್ನು ಎದುರಿಸುತ್ತಿದ್ದು, ಮತ್ತೊಮ್ಮೆ ನಿಮ್ಮ ಬೆಂಬಲ ಅಗತ್ಯವಾಗಿದೆ. ನನ್ನ ಕ್ರೌಡ್ ಫಂಡಿಂಗ್ ಅಭಿಯಾನಕ್ಕೆ ದಯವಿಟ್ಟು ಕೊಡುಗೆ ನೀಡಿ ಎಂದು ಅತಿಶಿ ಪೋಸ್ಟ್ ಮಾಡಿದ್ದಾರೆ.
70,000 ಕೋಟಿ ರೂ.ಗಳ ಬಜೆಟ್ ಮಂಡಿಸಿರುವ ಅತಿಶಿ, ದೇಶದ ಇತಿಹಾಸದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಕ್ರೌಡ್ ಫಂಡಿಂಗ್ ಕೋರಿದ ಮೊದಲ ಹಾಲಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಎಎಪಿ ನಾಯಕಿ ರೀನಾ ಗುಪ್ತಾ ಹೇಳಿದ್ದಾರೆ. ಎಎಪಿ ರಚನೆಯಾದಾಗಿನಿಂದಲೂ ಅದು ಚುನಾವಣೆಯಲ್ಲಿ ಸ್ಪರ್ಧಿಸಲು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುತ್ತಿದೆ ಎಂದು ಅವರು ಹೇಳಿದರು.
ಈ ಮಧ್ಯೆ ಎಎಪಿ ನೇತೃತ್ವದ ಸರ್ಕಾರವನ್ನು ತೀವ್ರವಾಗಿ ಟೀಕಿಸಿರುವ ಬಿಜೆಪಿ, ವ್ಯಾಪಕ ಭ್ರಷ್ಟಾಚಾರ, ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅಸಮರ್ಥತೆ ಮತ್ತು ನಗರದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮಟ್ಟವನ್ನು ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದೆ. ಎಎಪಿಯ ಆಡಳಿತ ದೆಹಲಿಗೆ ಅಪಾಯಕಾರಿಯಾಗಿದೆ ಎಂದು ಬಿಜೆಪಿ ಹೇಳಿದೆ. ದೆಹಲಿ ವಿಧಾನಸಭೆಗೆ ಫೆಬ್ರವರಿ 5 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಫೆಬ್ರವರಿ 8ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.
Advertisement