
ಬಿಜಾಪುರ: ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ಭಾನುವಾರ ಭದ್ರತಾ ಪಡೆಗಳೊಂದಿಗೆ ನಡೆಸಿದ ಎನ್ ಕೌಂಟರ್ ನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ನಕ್ಸಲೀಯರು ಹತ್ಯೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಪಡೆಗಳ ಜಂಟಿ ತಂಡವೊಂದು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದಾಗ ಮದ್ದೇಡ್ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡೆಪಾರ-ಕೊರಂಜೆಡ್ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ ಎನ್ ಕೌಂಟರ್ ನಡೆದಿದೆ ಎಂದು ಬಸ್ತಾರ್ ವಲಯದ ಐಜಿಪಿ ಪಿ. ಸುಂದರ್ ರಾಜ್ ತಿಳಿಸಿದ್ದಾರೆ.
ಇಂದ್ರವತಿ ರಾಷ್ಟ್ರೀಯ ಉದ್ಯಾನವನದಲ್ಲಿ ಬರುವ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರ ಚಲನವಲನ ಬಗ್ಗೆ ಮಾಹಿತಿ ಸಿಕ್ಕ ನಂತರ ಜಿಲ್ಲಾ ಮೀಸಲು ಪಡೆ, ವಿಶೇಷ ಕಾರ್ಯ ಪಡೆ ಶನಿವಾರ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಇಂದು ಮಧ್ಯಾಹ್ನ 3-4 ಗಂಟೆಯವರೆಗೂ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಐವರು ನಕ್ಸಲೀಯರ ಮೃತದೇಹಗಳು ಪತ್ತೆಯಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಎನ್ ಕೌಂಟರ್ ನಡೆದ ಸ್ಥಳದಿಂದ ಒಂದು SLR (ಸೆಲ್ಫ್ ಲೋಡಿಂಗ್ ರೈಫಲ್ ) ಒಂದು 12 ಬೋರ್ ರೈಪಲ್, ಎರಡು ಸಿಂಗ್ ಶಾಟ್ ರೈಫಲ್ಸ್ ಮತ್ತಿತರ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. ಹತ್ಯೆಯಾದ ನಕ್ಸಲೀಯರ ಗುರುತನ್ನು ಇನ್ನೂ ಪತ್ತೆ ಹಚ್ಚಬೇಕಾಗಿದೆ ಎಂದು ಐಜಿಪಿ ತಿಳಿಸಿದ್ದಾರೆ. ಇದರೊಂದಿಗೆ 2025ರಲ್ಲಿ ಛತ್ತೀಸ್ ಗಢದಲ್ಲಿ ನಡೆದ ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ 14 ನಕ್ಸಲೀಯರ ಹತ್ಯೆಯಾಗಿದೆ.
ಜನವರಿ 6 ರಂದು ನಾರಾಯಣಪುರ- ದಾಂತೇವಾಡ- ಬಿಜಾಪುರ ಜಿಲ್ಲೆಯ ಗಡಿಯಲ್ಲಿ ನಡೆದ ಮೂರು ದಿನಗಳ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ನಕ್ಸಲೀಯರನ್ನು ಹತ್ಯೆ ಮಾಡಲಾಗಿತ್ತು. ಜನವರಿ 9 ರಂದು ಸುಕ್ಮಾ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಮೂವರು ನಕ್ಸಲೀಯರು ಹತ್ಯೆಯಾಗಿದ್ದರು.
Advertisement