Video: 'ಧರ್ಮದ್ರೋಹಿಗಳ ಸಂಖ್ಯೆ ಹೆಚ್ಚುತ್ತಿದೆ'; 4 ಮಕ್ಕಳ ಹುಟ್ಟಿಸಿ 1 ಲಕ್ಷ ರೂ ಬಹುಮಾನ ಗೆಲ್ಲಿ; ಯುವ ದಂಪತಿಗಳಿಗೆ ಬಂಪರ್ ಆಫರ್!
ಭೋಪಾಲ್: 4 ಮಕ್ಕಳ ಹುಟ್ಟಿಸಿದರೆ ದಂಪತಿಗಳಿಗೆ 1 ಲಕ್ಷ ರೂ ಬಹುಮಾನ ನೀಡುತ್ತೇವೆ ಎಂದು ಮಧ್ಯ ಪ್ರದೇಶದ ಸಮುದಾಯವೊಂದರ ನಾಯಕರು ಬಂಪರ್ ಆಫರ್ ಘೋಷಣೆ ಮಾಡಿದ್ದಾರೆ.
ಹೌದು.. ಭಾರತ ದೇಶದ ಜನಸಂಖ್ಯೆ 140 ಕೋಟಿ ದಾಟಿದ್ದು, ಜಗತ್ತಿನಲ್ಲೇ ಭಾರತ ಜನಸಂಖ್ಯೆಯಲ್ಲಿ ಚೀನಾವನ್ನೂ ಹಿಂದಿಕ್ಕಿ ಅಗ್ರ ಸ್ಥಾನದಲ್ಲಿದೆ. ಅದಾಗ್ಯೂ ಭಾರತದ ಕೆಲ ಸಮುದಾಯಗಳು ಮಾತ್ರ ಹೆಚ್ಚು ಹೆಚ್ಚು ಮಕ್ಕಳನ್ನು ಹೊಂದುವಂತೆ ಪ್ರೇರೇಪಿಸುತ್ತಿವೆ. ಈ ಹಿಂದೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ 3 ಮಕ್ಕಳ ಹೊಂದುವ ಕುರಿತು ಹೇಳಿಕೆ ನೀಡಿದ್ದರು.
"ಜನಸಂಖ್ಯೆಯಲ್ಲಿನ ಕುಸಿತವು ಕಳವಳಕಾರಿ ವಿಷಯವಾಗಿದೆ. ಆಧುನಿಕ ಜನಸಂಖ್ಯಾ ಅಧ್ಯಯನಗಳು ಒಂದು ಸಮುದಾಯದ ಜನಸಂಖ್ಯೆಯು 2.1 ರ ಫಲವತ್ತತೆ ದರಕ್ಕಿಂತ ಕಡಿಮೆಯಾದಾಗ, ಆ ಸಮಾಜವು ಅಳಿವಿನಂಚಿನಲ್ಲಿದೆ ಎಂದು ಸೂಚಿಸುತ್ತದೆ. ಹೀಗಾಗಿ ಪ್ರತೀ ಭಾರತೀಯ ಕುಟುಂಬವು ಮೂರು ಮಕ್ಕಳನ್ನು ಹೊಂದಬೇಕು ಎಂದು ಭಾಗವತ್ ಹೇಳಿದ್ದರು.
ಇದೀಗ ಭಾಗವತ್ ಅವರ ಹೇಳಿಕೆಯನ್ನು ನೆನಪಿಸುವಂತೆ ಮತ್ತೋರ್ವ ಹಿಂದೂಪರ ನಾಯಕ ನಾಲ್ಕು ಮಕ್ಕಳನ್ನು ಹೊಂದುವಂತೆ ತಮ್ಮ ಸಮುದಾಯಕ್ಕೆ ಕರೆ ನೀಡಿದ್ದಾರೆ. ಮಧ್ಯಪ್ರದೇಶದ ಪರಶುರಾಮ ಕಲ್ಯಾಣ ಮಂಡಳಿಯ ಅಧ್ಯಕ್ಷರಾಗಿರುವ ಮತ್ತು ಕ್ಯಾಬಿನೆಟ್ ಸಚಿವ ಸ್ಥಾನ ಹೊಂದಿರುವ ಪಂಡಿತ್ ವಿಷ್ಣು ರಾಜೋರಿಯಾ ಅವರು ಈ ಹೇಳಿಕೆ ನೀಡಿದ್ದು, ನಾಲ್ಕು ಮಕ್ಕಳನ್ನು ಹೊಂದುವ ಯುವ ಬ್ರಾಹ್ಮಣ ದಂಪತಿಗಳಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಧರ್ಮದ್ರೋಹಿಗಳ ಸಂಖ್ಯೆ ಹೆಚ್ಚುತ್ತಿದೆ
ಭೋಪಾಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜೋರಿಯಾ, "ನಾವು ನಮ್ಮ ಕುಟುಂಬಗಳ ಮೇಲೆ ಹೆಚ್ಚಾಗಿ ಗಮನಹರಿಸುವುದನ್ನು ನಿಲ್ಲಿಸಿರುವುದರಿಂದ" "ಧರ್ಮದ್ರೋಹಿ"ಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದರು.
"ನನಗೆ ಯುವಕರಿಂದ ಹೆಚ್ಚಿನ ಭರವಸೆಗಳಿವೆ. ವಯಸ್ಸಾದವರಿಂದ ನಾವು ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ನಾನು ಹೇಳುವುದನ್ನು ಎಚ್ಚರಿಕೆಯಿಂದ ಕೇಳಿಸಿಕೊಳ್ಳಿ, ಭವಿಷ್ಯದ ಪೀಳಿಗೆಯ ರಕ್ಷಣೆಗೆ ನೀವು ಜವಾಬ್ದಾರರು. ಈಗಿನ ಯುವಕರು ಒಂದು ಮಗು ನೀತಿ ಹಿಂಬಾಲಿಸುವುದನ್ನು ನಿಲ್ಲಿಸಬೇಕು. ಇದು ತುಂಬಾ ಸಮಸ್ಯಾತ್ಮಕವಾಗಿದೆ. ಕನಿಷ್ಠ ನಾಲ್ಕು ಮಕ್ಕಳನ್ನು ಹೊಂದಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ" ಎಂದು ಅವರು ಹೇಳಿದರು.
ಅಲ್ಲದೆ ಹೀಗೆ ನಾಲ್ಕು ಮಕ್ಕಳನ್ನು ಹೊಂದುವ ದಂಪತಿಗಳಿಗೆ ಪರಶುರಾಮ ಮಂಡಳಿಯು 1 ಲಕ್ಷ ರೂ. ಪ್ರಶಸ್ತಿಯನ್ನು ನೀಡುತ್ತದೆ. ನಾನು ಮಂಡಳಿಯ ಅಧ್ಯಕ್ಷನಾಗಿದ್ದರೂ ಅಥವಾ ಇಲ್ಲದಿದ್ದರೂ, ಪ್ರಶಸ್ತಿಯನ್ನು ನೀಡಲಾಗುವುದು. ಶಿಕ್ಷಣ ಎಂಬುದು ಈಗ ದುಬಾರಿಯಾಗಿದೆ. ಹೇಗಾದರೂ ನಿರ್ವಹಿಸಿ, ಆದರೆ ಮಕ್ಕಳಿಗೆ ಜನ್ಮ ನೀಡುವಲ್ಲಿ ಹಿಂದುಳಿಯಬೇಡಿ. ಇಲ್ಲದಿದ್ದರೆ, ಧರ್ಮದ್ರೋಹಿಗಳು ಈ ದೇಶವನ್ನು ವಶಪಡಿಸಿಕೊಳ್ಳುತ್ತಾರೆ ಎಂದು ರಾಜೋರಿಯಾ ಎಚ್ಚರಿಕೆ ನೀಡಿದ್ದಾರೆ.