
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷವು (AAP) ಮತದಾರರ ಪಟ್ಟಿ ತಿರುಚಲು ಯತ್ನಿಸುತ್ತಿದೆ ಎಂದು ಆರೋಪಿಸಿ ದೆಹಲಿಯ ಬಿಜೆಪಿ ನಿಯೋಗವೊಂದು ಚುನಾವಣಾ ಆಯುಕ್ತರಿಗೆ ಮಂಗಳವಾರ ದೂರು ನೀಡಿದೆ.
ಸಂಸದ ಬಾನ್ಸುರಿ ಸ್ವರಾಜ್ ಮತ್ತು ಹಿರಿಯ ನಾಯಕ ಓಂ ಪಾಠಕ್ ಅವರೊಂದಿಗೆ ಚುನಾವಣಾ ಆಯೋಗದ ಅಧಿಕಾರಿಗಳು ಭೇಟಿಯಾದ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ, AAP ಪೂರ್ವಾಂಚಲ್ ಪ್ರದೇಶದ ಜನರ ಮತಗಳನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿದೆ. ನಿರ್ದಿಷ್ಟ ಗುಂಪುಗಳಿಗೆ ಅನಗತ್ಯ ಬೆಂಬಲ ನೀಡುತ್ತಿದ್ದು,ಅನಗತ್ಯವಾಗಿ ವಿಧಾನಸಭೆ ಚುನಾವಣೆಯ ಮೇಲೆ ಪ್ರಭಾವ ಬೀರುತ್ತಿದೆ ಎಂದು ಆರೋಪಿಸಿದರು.
ಚುನಾವಣಾ ಆಯುಕ್ತರನ್ನು ಭೇಟಿಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚ್‌ದೇವ, ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ್ದು, ದೆಹಲಿಯ ಮತದಾರರ ಪಟ್ಟಿಯನ್ನು ತಿರುಚುವ ಎಎಪಿಯ ಪ್ರಯತ್ನಗಳನ್ನು ಬಹಿರಂಗಪಡಿಸುವ ದಾಖಲೆಗಳನ್ನು ಸಲ್ಲಿಸಿದ್ದೇವೆ ಎಂದು ತಿಳಿಸಿದರು.
AAP ಕೋಮು ಗಲಭೆ ಉಂಟು ಮಾಡುವ ಉದ್ದೇಶ ಹೊಂದಿದ್ದು, ಪೂರ್ವಾಂಚಲ್‌ನ ಬಡವರು, ಕಾರ್ಮಿಕರು ಮತ್ತು ಜನರ ಮತಗಳನ್ನು ತಿರುಚಲು ಪ್ರಯತ್ನಿಸುತ್ತಿದೆ. ಅದಕ್ಕೆ ಪೂರಕ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.
ನವದೆಹಲಿಯ ಮಂದಿರ ಮಾರ್ಗದಲ್ಲಿರುವ ವಾಲ್ಮೀಕಿ ದೇವಸ್ಥಾನದ ಬಳಿ, ದರ್ಗಾಕ್ಕೆ ಸಂಬಂಧಿಸಿದ 60 ನೋಂದಾಯಿತ ಮತಗಳಿವೆ. ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದೇವೆ. ಅಲ್ಲದೇ, ಆಶ್ರಯ ಮನೆಯಡಿ ನೋಂದಾಯಿಸಲಾದ 250 ಮತಗಳನ್ನು ಪತ್ತೆಹಚ್ಚಿದ್ದೇವೆ, ಇದು ಪರಿಶೀಲನೆಯ ಅಗತ್ಯವಿದೆ. ಈ ಎಲ್ಲಾ ವಿಷಯಗಳ ಬಗ್ಗೆ ತನಿಖೆ ನಡೆಸಿ ಪೂರ್ವಾಂಚಲಿ ಸಹೋದರ ಸಹೋದರಿಯರಿಗೆ ಅಥವಾ ವಾಲ್ಮೀಕಿ ಸಮುದಾಯದವರಿಗೆ ಬೆದರಿಕೆ ಹಾಕುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದೇವೆ ಎಂದು ಅವರು ಹೇಳಿದರು.
Advertisement